ಬಳ್ಳಾರಿ

ಯುಜಿಸಿ ನಿರ್ದೇಶನದಂತೆ ಬೆಸ ಸೆಮಿಸ್ಟರ್ ಪರೀಕ್ಷೆಗಳ ರದ್ದತಿಗೆ ಆಗ್ರಹ

ಯುಜಿಸಿ ನಿರ್ದೇಶನದಂತೆ ಬೆಸ ಸೆಮಿಸ್ಟರ್ ಪರೀಕ್ಷೆಗಳ ರದ್ದತಿಗೆ ಆಗ್ರಹ

ಬಳ್ಳಾರಿ 19: ಯುಜಿಸಿಯ ನಿರ್ದೇಶನದಂತೆ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲು ಮತ್ತು ಉಚಿತ ಕೋವಿಡ್ ಲಸಿಕೆ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುವವರೆಗೂ ಆಫ್‌ಲೈನ್‌ನಲ್ಲಿ ತರಗತಿಗಳಾಗಲೀ ಪರೀಕ್ಷೆಗಳಾಗಲಿ ನಡೆಸಬಾರದೆಂದು ಆಗ್ರಹಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ವಿಜಯನಗರ ಶ್ರೀಕೃಷ್ಣದೇವರಾಯ “ವಿಶ್ವವಿದ್ಯಾಲಯ ಚಲೋ” ಹೋರಾಟ ನಡೆಸಿದರು.  

ಎಐಡಿಎಸ್‌ಓನ ರಾಜ್ಯ ಸೆಕ್ರೆಟರಿಯಟ್ ಸದಸ್ಯ ಜೆ. ಸೌಮ್ಯರವರು ಮಾತನಾಡುತ್ತಾ ಕಳೆದ ಒಂದು ತಿಂಗಳಿಂದ ಈ ಹೋರಾಟ ನಡೆಯುತ್ತಿದ್ದು ಹಲವಾರು ಹಂತಗಳನ್ನು ದಾಟಿದೆ. ಮೊದಲು ಗೂಗಲ್ ಫಾರ್ಮ್‌ ಸರ್ವೇ ಮಾಡಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ಶಾಸಕರು, ಸಚಿವರುಗಳಿಗೆ ಅಂತಿಮವಾಗಿ 1.15 ಲಕ್ಷ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ನಿವೃತ್ತ ಕುಲಪತಿಗಳು, ಸಾಹಿತಿಗಳ ಸಹಿಗಳನ್ನು ಸಂಗ್ರಹಿಸಿ  ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರದ ಕಡೆಯಿಂದ ವಿದ್ಯಾರ್ಥಿಗಳ ಪರವಾದ ಯಾವುದೇ ನಿರ್ಧಿಷ್ಟ ನಿಲುವು ವ್ಯಕ್ತವಾಗದ ಕಾರಣ ವಿದ್ಯಾರ್ಥಿಗಳು ರಾಜ್ಯಾದ್ಯಂತ ಆನ್‌ಲೈನ್ ತರಗತಿಗಳ ಬಹಿಷ್ಕರಿಸಿದರು, ಹಲವು ಜಿಲ್ಲೆಗಳಲ್ಲಿ ಆಫ್‌ಲೈನ್ ಪ್ರತಿಭಟನೆಗಳನ್ನು ಮಾಡಿದರು. ಅಷ್ಟೆ ಅಲ್ಲದೇ ದೇಶದಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಗಳ ಒತ್ತಡದಿಂದಾಗಿ ಇದೇ ತಿಂಗಳ 16ರಂದು ಯುಜಿಸಿಯು(ಯೂನಿವರ್ಸಿಟಿ ಗ್ರಾಂಟ್ಸ್‌ ಕಮಿಷನ್) ಪರೀಕ್ಷೆಗಳನ್ನು ನಡೆಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಈ ಮಾರ್ಗ ಸೂಚಿಗಳನ್ನು ವಿಎಸ್‌ಕೆ ವಿವಿಯು ಅನುಸರಿಸಬೇಕೆಂದು” ಆಗ್ರಹಿಸಿದರು. 

ಎಐಡಿಎಸ್‌ಓನ ಜಿಲ್ಲಾಧ್ಯಕ್ಷ ಗುರಳ್ಳಿ ರಾಜರವರು ಮಾತನಾಡುತ್ತಾ ದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಎಸ್‌ಕೆ ವಿವಿಯು ಯುಜಿಸಿಯ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. 

ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಎಐಡಿಎಸ್‌ಓನ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಜೆ.ಪಿ.ರವಿಕಿರಣ್‌ರವರು ವಹಿಸಿದ್ದರು. ಎಐಡಿಎಸ್‌ಓನ ಜಿಲ್ಲಾ ಸೆಕ್ರೆಟರಿಯಟ್ ಸದಸ್ಯ ಕೆ.ಈರಣ್ಣ, ಎಂ.ಶಾಂತಿ, ಕೆ.ಮಂಜುನಾಥ, ಜೆ.ಪಿ.ರೇವಣಸಿದ್ದೇಶ್ವರ, ಅನುಪಮಾ, ನಿಹಾರಿಕಾ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ