ಪ್ರವಾಸಿ ತಾಣಗಳ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವಂತೆ ಮನವಿ
ಬಳ್ಳಾರಿ 25: ನವದೆಹಲಿಯ ಸಂಸತ್ ಭವನದಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ಸಂಸದರಾದ ವೈ.ದೇವೇಂದ್ರಪ್ಪ ಮತ್ತು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಬುಧವಾರ ಭೇಟಿಯಾಗಿ ವಿವಿಧ ಬೇಡಿಕೆಗಳು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಬಳ್ಳಾರಿ ಕೋಟೆ, ಮಿಂಚೇರಿ ಗುಡ್ಡ, ಸಂಗನಕಲ್ಲು ಬೆಟ್ಟ, ಕನಕ ದುರ್ಗಮ್ಮ ದೇವಸ್ಥಾನ ಹಾಗೂ ಡಾ. ರಾಜಕುಮಾರ್ ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದ್ದು ಇದಕ್ಕೆ ಅನುಮತಿ ಮತ್ತು ನಿರ್ದೇಶನ ಹಾಗೂ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದರು.
ಬಳ್ಳಾರಿ ಗುಡ್ಡೆಕ್ಕೆ ರೋಪ್ ವೇ ಅಥವಾ ಕೇಬಲ್ ಕಾರ್ ನಿರ್ಮಿಸುವುದರಿಂದ ಹೆಚ್ಚಿನ ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡಿ ಕೋಟೆಯ ಆಕರ್ಷಕ ಮನಮೋಹಕವಾದ ಪ್ರಕೃತಿಯನ್ನು ಸವಿಯುತ್ತಾರೆ. ಈ ಬೆಟ್ಟ ಹತ್ತಲು ಎಲ್ಲ ಪ್ರಾಯದ ಪ್ರವಾಸಿಗರಿಗೆ ಕಷ್ಟವಾಗಿರುತ್ತದೆ. ಆದ್ದರಿಂದ ರೋಪ್ ವೇ ನಿರ್ಮಾಣ ಮಾಡಲು ಇದಕ್ಕೆ ಬೇಕಾದ ಎಲ್ಲಾ ಅನುಮತಿಯನ್ನು ಕೇಂದ್ರ ಪುರಾತತ್ವ ಇಲಾಖೆಯಿಂದ ನೀಡುವಂತೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವರಿಗೆ ಸಂಸದ ದೇವೆಂದ್ರಪ್ಪ ಮತ್ತು ಶಾಸಕ ಸೋಮಶೇಖರ ರೆಡ್ಡಿ ಅವರು ಮನವಿ ಮಾಡಿದರು.
ಏಕೀಕೃತ ಬಳ್ಳಾರಿ ಜಿಲ್ಲೆಯನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಾಗಿ ವಿಭಜಿಸುವುದರಿಂದಾಗಿ ಬಳ್ಳಾರಿಯಲ್ಲಿ ಪ್ರವಾಸಿ ಪ್ರಾಮುಖ್ಯತೆಯ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಅಗತ್ಯವು ಈಗ ಅಪಾರ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ, ಈ ಮೂಲಕ ಹಿಂದಿನ ವಿಜಯನಗರ ಸಾಮ್ರಾಜ್ಯದ ಪ್ರಮುಖ ಪುರಾತತ್ವ ಸ್ಥಳಗಳು ಈಗ ಹೊಸದಾಗಿ ರಚಿಸಲಾದ ವಿಜಯನಗರದ ಜಿಲ್ಲೆಯಲ್ಲಿ ಹಂಪಿ ಇದೆ. ಬಳ್ಳಾರಿ ಮತ್ತು ಸುತ್ತಮುತ್ತಲಿನ ಉಳಿದ ಪ್ರವಾಸಿ ಸ್ಥಳಗಳಿಗೆ ರಸ್ತೆ ಸಂಪರ್ಕವನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಮೂಲಕ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ನೂತನ ತಂತ್ರಜ್ಞಾನ ಬಳಸಿಕೊಂಡು ಮತ್ತು ಜಿಲ್ಲೆಯಲ್ಲಿ ಹೊಸ ಪ್ರವಾಸಿ ತಾಣವಾಗಿ ರಚಿಸುವ ಮೂಲಕ ನವೀನ ಮತ್ತು ಆಕರ್ಷಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಹೀಗಾಗಿ ಪ್ರವಾಸಿ ಸ್ಥಳಗಳಿಗೆ ಬೇಕಾದ ಅನುಮತಿ ಮತ್ತು ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದರು.