ಬಳ್ಳಾರಿ

ಬಿ.ಎಡ್ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಮನವಿ

ಬಿ.ಎಡ್ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಮನವಿ

ಬಳ್ಳಾರಿ 03:  ಇಂದು ಎಐಡಿವೈ.ಒ ಯುವಜನ ಸಂಘಟನೆ ವತಿಯಿಂದ ಐಟಿಐ ನಂತರ ಪದವಿ ಪಡೆದು ಬಿ.ಎಡ್. ಕೋರ್ಸ್‍ಗೆ ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ತಿರಸ್ಕರಿಸಲಾದ ಕುರಿತು ಅವರಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ- ಅಭ್ಯರ್ಥಿಗಳು ಅರ್ಹರಾಗಿದ್ದರೂ ಕೂಡ ಅವರ 2 ವರ್ಷದ ಐಟಿಐ ವಿದ್ಯಾರ್ಹತೆ ಪಿ.ಯು.ಸಿ ಗೆ ತತ್ಸಮಾನ ಇದೆ ಎಂದು ಸುತ್ತೋಲೆಯಲ್ಲಿ ನಮೂದಿಸಿದೆ. ಹಾಗಾಗಿ ಹಲವಾರು ಐಟಿಐ ಅಭ್ಯರ್ಥಿಗಳು ನಿಯಮಾನುಸಾರ ಮಾನ್ಯತೆ ಹೊಂದಿದ್ದರೂ ಐಟಿಐ ನಂತರ ಎನ್ ಐ ಓ ಸ್ ಅನುಸಾರ (ಭಾಷಾ ಕೋರ್ಸ್ ಮತ್ತು ಶೈಕ್ಷಣಿಕ ವಿಷಯಗಳನ್ನು ದೂರ ಕಲಿಕೆ ಮಾದರಿಯಲ್ಲಿ) ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕೆಂದು ಕಾರಣಗಳನ್ನು ಮೌಖಿಕವಾಗಿ ನೀಡಿ   ಬಿ.ಎಡ್ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಬಿ.ಎಡ್ ಪ್ರವೇಶಕ್ಕೆ ಪದವಿ ಶಿಕ್ಷಣ ಪ್ರಧಾನ ಅರ್ಹತೆಯಾಗಿದೆ. ಪದವಿಯಲ್ಲಿ ಈ ಈ ಎರಡೂ ವಿಷಯಗಳನ್ನು ವಿದ್ಯಾರ್ಥಿಗಳು ಓದಿರುತ್ತಾರೆ. ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕೆಂದೂ, ಈ ಕುರಿತು ಸಂಭಂದಪಟ್ಟ ಸಂಸ್ಥೆಗೆ ನಿರ್ದೇಶನ ನೀಡಬೇಕೆಂದು ಹೇಳಿದರು.

ಅಭ್ಯರ್ಥಿ ಎಲಿಸಾ ಪೀಟರ್ ಮಾತನಾಡಿ- ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ : ಸಿ.ಆ.ಸು.ಇ 81 ಸೇವನೆ 2017 ದಿನಾಂಕ 27.02.2018 ಇದರ ಅನುಸಾರ ಎನ್‍ಐಓಸ್ (ಭಾಷಾ ಕೋರ್ಸ್ ಮತ್ತು ಶೈಕ್ಷಣಿಕ ವಿಷಯಗಳನ್ನು ದೂರ ಕಲಿಕೆ ಮಾದರಿಯಲ್ಲಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂಬ ನಿರ್ದೇಶನ ಇರುವುದು  ನೇಮಕಾತಿಗೆ ಸಂಬಂಧಿಸಿದಂತೆ ಮಾತ್ರ. ಪ್ರಸ್ತುತ ಮೇಲ್ಕಾಣಿಸಿದ ಅಭ್ಯರ್ಥಿಗಳು 2017 ರಲ್ಲಿ ಪದವಿ ತರಗತಿಗಳಿಗೆ ಪ್ರವೇಶ ಪಡೆದಿದ್ದಾರೆ. ಹಾಗಾಗಿ ಈ ನಿರ್ದೇಶನವು ಈ ಅಭ್ಯರ್ಥಿಗಳಿಗೆ ಅನ್ವಯವಾಗಿಲ್ಲ. ಒಂದು ವೇಳೆ ಶೈಕ್ಷಣಿಕ ಪ್ರವೇಶಕ್ಕೆ ಈ ಪರೀಕ್ಷೆಗಳು  ಅನಿವಾರ್ಯವಾದಲ್ಲಿ ಮೇಲಿನ ಅಭ್ಯರ್ಥಿಗಳನ್ನು ಬಿ.ಎಡ್ ಗೆ ಪ್ರವೇಶಾತಿ ಕಲ್ಪಿಸಿ, ಅವರ ಬಿ.ಎಡ್ ಶಿಕ್ಷಣ ಪೂರ್ಣಗೊಳ್ಳುವುದರೊಳಗೆ ಅವರು ಈ ಕೋರ್ಸ್‍ನ್ನು ಮುಗಿಸಲು ಅನುಮತಿ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ ಎಂದರು. 

ಜಿಲ್ಲಾ ಉಪಾಧ್ಯಕ್ಷ ಎ.ಪಂಪಾಪತಿ ಮತನಾಡಿ-ಇದು ಆ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯೂ ಆಗಿದೆ. ಇದರಿಂದ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ತಕ್ಷಣ ತಾವುಗಳು ಸಂಭಂದಪಟ್ಟ ಸಂಸ್ಥೆಯ  ಈ ನ್ಯೂನ್ಯತೆಯನ್ನು ಸರಿಪಡಿಸಿ ಅಭ್ಯರ್ಥಿಗಳ ಅರ್ಜಿಗಳನ್ನು ಮಾನ್ಯ ಮಾಡಿ ಅವರಿಗೆ ಬಿ.ಎಡ್. ಪ್ರವೇಶಕ್ಕೆ ಅವಕಾಶ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ನಿಯೋಗದಲ್ಲಿ ಪ್ರಶಾಂತ್ ಕುಮಾರ್.ಡಿ, ಮಹೇಂದ್ರ..ಟಿ, ಸುರೇಶ್.ಹೆಚ್ ಇದ್ದರು.

ಸುದ್ದಿ ಓದಿ