ವಿಜಯಪುರ

ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮನವಿ

ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮನವಿ

ಆಲಮೇಲ  18: ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಸದಸ್ಯೆ ಸಾಧಿಕಾ ಫ. ಸುಂಬಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಒತ್ತಾಯಿಸಿ 12 ಸದಸ್ಯರು ಶುಕ್ರವಾರ ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಅವರಿಗೆ ಮನವಿ ಸಲ್ಲಿಸಿದರು.  

19 ಸದಸ್ಯರನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರಿಗೆ ಅಗತ್ಯವಿರುವ ಬಹುಮತಕ್ಕಿಂತ ಹೆಚ್ಚು ಸದಸ್ಯರು ಬೆಂಬಲ ಹಿಂತೆಗೆದುಕೊಂಡಿದ್ದು, ಅವಿಶ್ವಾಸ ನಿರ್ಣಯದ ಸಭೆಯನ್ನು ಶೀಘ್ರದಲ್ಲಿ ಕರೆಯುವಂತೆ ಸದಸ್ಯರು ಆಗ್ರಹಿಸಿದ್ದಾರೆ.  

ಈ ಕುರಿತು ಮಾತನಾಡಿದ ಸದಸ್ಯ ಸಂಜೀವಕುಮಾರ ಯಂಟಮಾನ, ಅಧ್ಯಕ್ಷರು ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದು, ಸದಸ್ಯರ ಅಭಿಪ್ರಾಯಕ್ಕೆ ಸೂಕ್ತ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು. ಕೆಪಿಆರ್ ಸಕ್ಕರೆ ಕಾರ್ಖಾನೆಯ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಮಾಹಿತಿ ನೀಡದೆ ಅಕ್ರಮ ನಡೆದಿದೆ ಎಂಬ ಅನುಮಾನವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.  

ಅವಿಶ್ವಾಸ ನಿರ್ಣಯದ ಸಭೆ ನಡೆಯುವವರೆಗೆ ಯಾವುದೇ ಆರ್ಥಿಕ ಅನುಮೋದನೆ ಅಥವಾ ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳದಂತೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.  

ಅವಿಶ್ವಾಸ ನಿರ್ಣಯದ ಮನವಿಗೆ ಬಿಜೆಪಿ ಸದಸ್ಯರಾದ ಉಪಾಧ್ಯಕ್ಷೆ ಸುಮಾ ಕತ್ತಿ, ಸಂಜೀವ ಯಂಟಮಾನ, ಚಂದ್ರಕಾಂತ ಕಾಂಬಳೆ, ಚಂದ್ರಶೇಖರ ಹಳೇಮನಿ, ಜುಬೇದಾಬೇಗಂ ಸುಂಬಡ, ಹಣಮಂತ ಹೂಗಾರ, ರೇಣುಕಾ ಭೋವಿ, ಬಿಸ್ಮಿಲ್ಲಾ ಮಸಳಿ ಹಾಗೂ ಕಾಂಗ್ರೆಸ್ ಸದಸ್ಯರಾದ ಅಶೋಕ ಕೊಳಾರಿ, ವಿಜಯಲಕ್ಷ್ಮೀ ಜರಕರ, ಯಲ್ಲಮ್ಮ ನಾಯ್ಕೋಡಿ ಮತ್ತು ಪಕ್ಷೇತರ ಸದಸ್ಯ ಉಮರ್ ಬಿಳವಾರ ಸಹಿ ಹಾಕಿದ್ದಾರೆ. 


ಸುದ್ದಿ ಓದಿ