ಬಳ್ಳಾರಿ

26ರಂದು ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಣೆ: ಮಂಜುನಾಥ

26ರಂದು ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ  ಆಚರಣೆ: ಮಂಜುನಾಥ

ಬಳ್ಳಾರಿ 19: ಕೊವಿಡ್-19 ಮತ್ತು ರೂಪಾಂತರ ಕೊರೋನ ಭೀತಿಯ ಹಿನ್ನೆಲೆಯಲ್ಲಿ ಜನವರಿ 26ರಂದು ನಡೆಯುವ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಗೌರವ ಪೂರ್ವಕವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಮತ್ತು ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ಯಾನಿಟೈಸೇಷನ್, ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಳ್ಳುವುದರ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಬೇಕೆಂದು ತಿಳಿಸಿದರು.

ಜ. 26ರಂದು ಬೆಳಗ್ಗೆ 8ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ(ಮೋತಿ ವೃತ್ತ) 150 ಅಡಿ ಎತ್ತರದ ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ನಂತರ ವೈದ್ಯಕೀಯ ಕಾಲೇಜಿನಲ್ಲಿರುವ ಮಹಾತ್ಮ ಗಾಂಧೀಜಿಯ ಪ್ರತಿಮೆಗೆ ಗೌರವ ಸಮರ್ಪಣೆಯನ್ನು ಮಾಡಿ, ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ

ಪಥ ಸಂಚಲನ ಪಡೆಗಳಿಂದ ಗೌರವ ಸ್ವೀಕರಿಸಿ ಸಂದೇಶ ನೀಡಲಿದ್ದಾರೆ ಎಂದು ವಿವರಿಸಿದರು. 

ಗಣರಾಜ್ಯೋತ್ಸವದ ಪ್ರಯುಕ್ತ ಪ್ರತಿವರ್ಷ ನಡೆಯುತ್ತಿದ್ದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಭೂಮಿಯ ಹಕ್ಕು ಪತ್ರಗಳನ್ನು ವಿತರಿಸುವುದರ ಜೊತೆಗೆ ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕೊವೀಡ್-19 ಮಾರ್ಗಸೂಚಿಗಳನ್ವಯ ಗಣರಾಜ್ಯೋತ್ಸವವನ್ನು ಆಚರಿಸುವಂತೆ ಸೂಚಿಸಿದರು, ಜಿಲ್ಲೆಯ ಎಲ್ಲಾ ಪ್ರಮುಖ ವೃತ್ತಗಳಲ್ಲಿ, ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಮಾಡಬೇಕು ಮತ್ತು ಅಂದು ವಿವಿಧ ದೇವಸ್ಥಾನಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ, ವಿಶೇಷ ಪೂಜೆ, ಪಾರ್ಥನೆಗಳನ್ನು ಮಾಡಲು ಸೂಚಿಸಿದರು. 

ಸಭೆಯಲ್ಲಿ ಸಹಾಯಕ ಆಯುಕ್ತರಾದ ರಮೇಶ್ ಕೊನರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣನವರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸುದ್ದಿ ಓದಿ