ತಾಳಿಕೋಟಿ

ನಾಳೆಯಿಂದ ಸರದಿ ಉಪವಾಸ ಸತ್ಯಾಗ್ರಹ

ನಾಳೆಯಿಂದ ಸರದಿ ಉಪವಾಸ ಸತ್ಯಾಗ್ರಹ


ತಾಳಿಕೋಟಿ 21: ತಾಳಿಕೋಟಿ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 18 ದಿನ ಪೂರೈಸಿ 19ನೇ ದಿನಕ್ಕೆ ಕಾಲಿಟ್ಟಿದೆ.  

ಪಟ್ಟಣದ ಪ್ರವಾಸಿ ಮಂದಿರದ ಎದುರು ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ತಾಳಿಕೋಟಿ ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ರೈತರ ಹಿತಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ವಿಜಯಪುರ ಜಿಲ್ಲೆ ಬರಪೀಡಿತವೆಂದು ಸರ್ಕಾರಕ್ಕೆ ಮನವರಿಕೆಯಾಗಿದ್ದರೂ ಮೂರು ತಾಲೂಕುಗಳನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಹೇಳಿದರು.  

ಸರ್ಕಾರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬುಧವಾರದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಪ್ರತಿದಿನ ಇಬ್ಬರು ರೈತರು ಬೆಳಗ್ಗೆ 11ರಿಂದ ಮರುದಿನ ಬೆಳಗ್ಗೆ 11ರವರೆಗೆ ಆಹಾರ ಮತ್ತು ನೀರು ಸೇವಿಸದೆ ಉಪವಾಸ ನಡೆಸಲಿದ್ದಾರೆ.

ಈ ರೀತಿಯಾಗಿ ನಾಲ್ಕೈದು ದಿನಗಳ ಕಾಲ ಹೋರಾಟ ಮುಂದುವರಿಸಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.  

ಈ ಸಂದರ್ಭದಲ್ಲಿ ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಶ್ರೀನಿವಾಸ ಗೊಟಗುಣಕಿ, ಸಂಗನಗೌಡ ಕೋಳೂರು, ಮುತ್ತು ಪಾತರಗೋಳ, ಪ್ರಭಾಕರ್ ಗುಳಗುಂಟಿ, ಮಲ್ಲನಗೌಡ ಬಿರಾದಾರ,

ಸಂಗನಗೌಡ ಟಕ್ಕಳಕಿ, ಶಾಂತಗೌಡ ವಠಾರ, ಗೌಡಪ್ಪ ಕೊಡಗನೂರ, ರಾಮನಗೌಡ ಯಾಳವಾರ, ಅರುಣಕುಮಾರ ತುಂಬಗಿ, ಶಿವರಾಜ ಪಾಟೀಲ, ಗೌಡಪ್ಪ ಲಿಂಗದಳ್ಳಿ, ರಾಮನಗೌಡ ಕೊಳೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ