ಲೇಖನಗಳು

ಕರುಣೆ ಪ್ರೀತಿಗೆ ಎದೆಯಲಿ ಜಾಗ ಕೊಡಿ ಎನ್ನುವ ರೇಖಾ ಭಟ್ ಗಜಲ್

ಕರುಣೆ ಪ್ರೀತಿಗೆ ಎದೆಯಲಿ ಜಾಗ ಕೊಡಿ ಎನ್ನುವ ರೇಖಾ ಭಟ್ ಗಜಲ್

ಸುತ್ತಲೂ ಹೆಡೆಯೆತ್ತಿದರೇನು ಸಾವಿರ ಘಟಸರ​‍್ಗಳು 

ವಿಷವ ಮಣಿಸಿ ತಣಿಸುವ ಕಲೆಯ ಕೈಗಳಿಗೆ ಕಲಿಸಬೇಕು 

ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯ ರೇಖಾ ಭಟ್ ಬರೆದಿರುವ ಈ ಮೇಲಿನ ಗಜಲ್ ಸಾಲುಗಳು, ಎಂತಹ ಆಪತ್ತುಗಳು ಇದಿರಾದರೂ ನಗುತ್ತಲೇ ಎಲ್ಲವನ್ನೂ ಎದುರಿಸುವ ಕಲೆ ಕರಗತ ಮಾಡಿಕೊಂಡಿರಬೇಕು ಎಂಬುದನ್ನು ಹೇಳುತ್ತವೆ. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ರೇಖಾ ಭಟ್ ಸಾಹಿತ್ಯದ ಓದು, ಬರವಣಿಗೆ ಹಾಗೂ ಗಾಯನವನ್ನು ರೂಢಿಸಿಕೊಂಡವರು. ವಿಜಯವಾಣಿ ‘ಮನೋಲ್ಲಾಸ’ ಅಂಕಣದಲ್ಲಿ ಇವರ ಬರಹಗಳು ಪ್ರಕಟವಾಗಿವೆ.  ಗಜಲ್, ಕವಿತೆ, ಮಕ್ಕಳ ಪದ್ಯ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿವೆ. ಇವರು ರಚಿಸಿದ ಮೊದಲ ಗಜಲ್ ಸಂಕಲನ ‘ಮಡಿಲ ನಕ್ಷತ್ರ’ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿಯಾಗಿದೆ. ‘ನೀನಿರದ ಬದುಕು’ ಹಾಗೂ ಇನ್ನಿತರೆ ಭಾವಗೀತೆಯ ಧ್ವನಿಮುದ್ರಿಕೆಗಳಲ್ಲಿ ಇವರ ಭಾವಗೀತೆಗಳಿವೆ. ಇವರು ರಚಿಸಿರುವ ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ.


                                                                                                    ಗಜಲ್ 


                                                                 ಕರುಣೆಯ ಕಡಲು ಎದೆಯ ಸೇರಲಿ ಚೂರು ಜಾಗ ನೀಡಿ   

ಶಾಂತಿಯ ಬಳ್ಳಿ ಜಗ ವ್ಯಾಪಿ ಹಬ್ಬಲಿ ಚೂರು ಜಾಗ ನೀಡಿ 


ನಮ್ಮೊಳಗಿನ ದೀಪದ ಮಸಿಯೊರೆಸುವ ತುರ್ತಿದೆ ಈಗ 

ಕುಡಿ ಬೆಳಕು ಒಳಹೊರಗೆ ಬೆಳಗಲಿ ಚೂರು ಜಾಗ ನೀಡಿ  


ಪ್ರೀತಿ ದ್ವೇಷಗಳ ಬಣ್ಣ ಕೆಂಪೇ ಆದರೂ ಗುಣ ಬೇರೆ ತಾನೇ 

ಎಲ್ಲೆಲ್ಲೂ ಕೆಂಗುಲಾಬಿಗಳೇ ಅರಳಲಿ ಚೂರು ಜಾಗ ನೀಡಿ   


ಚರಿತೆಯ ಕಪ್ಪು ಕಲೆಯ ಎಣಿಸುವುದಲ್ಲ ಅಳಿಸಬೇಕಿದೆ ಈಗ 

ನಿನ್ನೆಯ ಕ್ಷಮಿಸಿ ಹೊಸನಾಳೆ ಅಡಿಯಿಡಲಿ ಚೂರು ಜಾಗ ನೀಡಿ 


‘ರೇಖೆ’ಗಳು ಒಂದಾಗದಿದ್ದರೂ ಇನ್ನೊಂದರ ಬಗೆಯದಿದ್ದರೆ ಸಾಕು 

ಮಾನವೀಯತೆ ತನ್ನ ಮನೆಯಲ್ಲೇ ನೆಲೆಸಲಿ ಚೂರು ಜಾಗ ನೀಡಿ   

                                                                        - ರೇಖಾ ಭಟ್      


‘ತಮ್ಮ ನೀನು ಅರಸನಾಗಬೇಡ/ಕೀರೀಟ ಧರಿಸಬೇಡ, ಬಂಗಾರ ಬೇಡ, ಕತ್ತಿ ಬೇಡ/ರಕ್ತ ಕುಡಿಯಬೇಡ/ನೀನು ಮಾಮರವಾಗು, ಮಾವಾಗು’ ಎಂದು ಕವಿ ನರೇಂದ್ರ ರೈ ದೇರ್ಲ ಅವರು ‘ಅಮರ-ಆ ಮರ’ ಎನ್ನುವ ಕವಿತೆಯಲ್ಲಿ ಬರೆಯುತ್ತಾರೆ. ಇಂದು ಏನೆಲ್ಲ ಆಗುವುದಕ್ಕಿಂತ ಮರವಾಗುವುದು, ಇತರರಿಗೆ ನೆರಳಾಗುವುದು ಜೊತೆಗೆ ಅತಿಮುಖ್ಯವಾಗಿ ಮನುಷ್ಯನಾಗುವ ಅಗತ್ಯವಿದೆ. ಏನೆಲ್ಲವನ್ನೂ ಗಳಿಸಿದ್ದೇವೆ, ಎಲ್ಲವನ್ನೂ ಸಾಧಿಸಿದ್ದೇವೆ, ಬೇಡವಾದವುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಕೂತಿದ್ದೇವೆ. ಬದುಕಿಗೆ ಬೇಕಾದ ಅವಶ್ಯಕ ಸಂಗತಿಗಳನ್ನು ಮಾತ್ರ ಅಲ್ಲಗಳೆದು, ನಿರಾಕರಿಸಿ ಮನುಷ್ಯತ್ವವನ್ನೇ ಮರೆತವರಂತೆ ಮೆರೆಯುತ್ತಿದ್ದೇವೆ. ಹಾಗೆಂದೇ ರೇಖಾ ಭಟ್ ಅವರ ಈ ಗಜಲ್ ‘ನಮ್ಮೊಳಗೆ ಜಾಗ ನೀಡಬೇಕಾದ’ ಮಹತ್ವದ ಸಂಗತಿಗಳ ಕುರಿತಾಗಿ ಬೆಳಕು ಚೆಲ್ಲುತ್ತದೆ. ಬಹುಶಃ ಇದು ಇಂದಿನ ಅತೀ ತುರ್ತು ಕೂಡ ಹೌದು. 

ದ್ವೇಷ-ಅಸೂಯೆಗಳ ದಳ್ಳುರಿಗಳಲ್ಲಿ ಬೆಂದದ್ದು ಸಾಕು, ಕರುಣೆಯ ಕಡಲು ನಮಗಾಗಿ ಕಾದಿದೆ. ನಮ್ಮೆದೆಯೊಳಗೆ ಅದಕ್ಕೆ ಒಂಚೂರು ಜಾಗ ಮಾಡಿ ಕೊಡೋಣ. ಗತಕಾಲದಿಂದಲೂ ಯುದ್ಧದಾಹದಿಂದ ನೆತ್ತರು ನೆಲ ನೆಕ್ಕುತ್ತಿದೆ. ಸಾಕಿನ್ನು, ಶಾಂತಿಯ ಬಳ್ಳಿ ಜಗದ ತುಂಬ ಹಬ್ಬಿ ನೆಮ್ಮದಿ ನೆಲೆಸಲಿ. ಅದೆಷ್ಟು ದಿನ ನಮ್ಮ ತಪ್ಪುಗಳನ್ನು ನಾವೇ ಸಮರ್ಥಿಸಿಕೊಳ್ಳುವುದು? ದೀಪಕ್ಕೆ ಮೆತ್ತಿರುವ ಕಪ್ಪನ್ನು ಒರೆಸೋಣ. ಬೆಳಕಿನ ಕಿರಣಗಳು ಹೊರಗಷ್ಟೇ ಅಲ್ಲ, ನಮ್ಮೊಳಗೂ ಪಸರಿಸಲಿ. ಪ್ರೀತಿ ಮತ್ತು ದ್ವೇಷದ ರಂಗು ಜಗತ್ತಿಗೆ ಒಂದೇ ಕಾಣಿಸಿದರೂ ಅವುಗಳು ಬೀರುವ ಗುಣ, ಪರಿಣಾಮ ವಿಭಿನ್ನ. ನಗುನಗುವ ಕೆಂಪು ಬಣ್ಣದ ಗುಲಾಬಿ ಹೂಗಳೇ ಎಲ್ಲೆಡೆಗೂ ಅರಳಲಿ, ಒಂಚೂರು ಜಾಗ ನೀಡಿ. ಚರಿತ್ರೆಯ ಪುಟಗಳನ್ನು ತೆರೆಯುವಾಗ ಕಾಣುವ ಪ್ರಮಾದಗಳು ಸಾಕಷ್ಟಿರಬಹುದು. ಆದರೆ ಅವುಗಳನ್ನೆಲ್ಲ ಮರೆತು ಹೊಸ ಹಗಲಿನ ಹೆಗಲು ತಬ್ಬಬೇಕಿದೆ. ಒಂದು ಮಾಡಲಾಗದಿದ್ದರೂ ಸರಿ, ಮನಸುಗಳನ್ನು ಒಡೆಯುದು ಬೇಡ. ಮನುಷ್ಯಪ್ರೀತಿಗೆ ಒಂಚೂರು ನಿಮ್ಮೆದೆಯೊಳಗೆ ತಾವು ನೀಡಿ ಸಾಕು ಎಂಬ ಆಶಯವನ್ನು ಹೊತ್ತ ರೇಖಾ ಭಟ್ ಅವರ ಗಜಲ್ ಜಗದ ಒಳಿತಿಗೆ ಮಿಡಿಯುತ್ತದೆ. ಇಂತಹ ಅಪರೂಪದ ಗಜಲ್ ಬರೆದ ರೇಖಾ ಭಟ್ ಅವರಿಗೆ ನಮನಗಳು. 

- * * * - 


ಸುದ್ದಿ ಓದಿ