ರಿಯಾಲಿಟಿ ಶೋಗಳ ಜೀವಾಳ ಕ್ರಿಯಾಶೀಲತೆ: ಶರಣಯ್ಯ
ಹಂಪಿ 03: ಪ್ರಸ್ತುತ ದಿನಗಳಲ್ಲಿ ರಿಯಾಲಿಟಿ ಶೋಗಳು ಜನರನ್ನು ಆರ್ಕಷಿಸುವ ಕಾರ್ಯಕ್ರಮಗಳಾಗಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಸತತ ಹೊಸತನದ ತುಡಿತ ಮೈಗೂಡಿಸಿಕೊಳ್ಳುವ ಮುಖಾಂತರ ರಿಯಾಲಟಿ ಶೋಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದು ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಮತ್ತು ಜೀ ಸಿನಿಮಾದ ನಿರ್ದೇಶಕರಾದ ಟಿ.ಶರಣಯ್ಯ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆನ್ಲೈನ್ ಮೂಲಕ ಹಮ್ಮಿಕೊಂಡಿದ್ದ ರಿಯಾಲಿಟಿ ಶೋಗಳಲ್ಲಿ ಉದ್ಯೋಗಾವಕಾಶಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ರಿಯಾಲಿಟಿ ಶೋಗಳು ಬಜೆಟ್ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಪ್ರೇಕ್ಷಕರನ್ನು ಸೆಳೆಯುವಲ್ಲಿ ರಿಯಾಲಿಟಿ ಶೋ ನಿರ್ಮಾಣ ಮತ್ತು ನಿರ್ದೇಶನ ಸವಾಲಿನ ಕೆಲಸವಾಗಿರುತ್ತದೆ. ಮನಸ್ಸಿನಲ್ಲಿ ಮೂಡಿದ ಹಾಗೆಯೇ ಪರದೆಯ ಮೇಲೆ ಯತವತ್ತಾಗಿ ಮೂಡಿಸುವಲ್ಲಿ ಕಾರ್ಯಕ್ರಮ ನಿರ್ದೇಶಕರು ಮತ್ತು ತಾಂತ್ರಿಕ ವಿಭಾಗದವರ ಪಾತ್ರ ಪ್ರಮುಖವಾಗಿರುತ್ತದೆ. ರಿಯಾಲಿಟಿ ಶೋಗಳ ಯಶಸ್ಸು ಬಹುತೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳ ಮೇಲೆ ನಿಂತಿರುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ರಿಯಾಲಿಟಿ ಶೋಗಳಲ್ಲಿ ಹಲವಾರು ಅವಕಾಶಗಳಿವೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಸುಬ್ಬಣ್ಣ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಪ್ರಾರಂಭದಲ್ಲಿ ಮುದ್ರಣ ಮಾಧ್ಯಮಕ್ಕೆ ಸೀಮಿತವಾಗಿದ್ದ ಮಾಧ್ಯಮವು ಇಂದು ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಹಲವಾರು ಆಯಾಮಗಳನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ಟೆಲಿವಿಷನ್ನ ಫಿಕ್ಷೆನ್ ಮತ್ತು ನಾನಾ ಫಿಕ್ಷೆನ್ ಕಾರ್ಯಕ್ರಮಗಳಲ್ಲಂತೂ ಯುವಜನತೆಗೆ ಬಹಳಷ್ಟು ಅವಕಾಶಗಳು ತೆರೆದುಕೊಂಡಿವೆ. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ವೈ ಸೋಮಶೇಖರ ಸಾಗ್ವತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಕಾರ್ಯಕ್ರಮಕ್ಕೆ ಸಹಾಯಕ ಗ್ರಂಥಪಾಲಕರಾದ ಶಂಕರಗೌಡ ಅವರು ತಾಂತ್ರಿಕ ಸಹಕಾರ ನೀಡಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರಾದ ಲೋಕೇಶ ಎಸ್.ಕೆ., ಮತ್ತು ಸಂತೋಷ ಕುಮಾರ ಚಿನ್ನಣ್ಣವರ, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಟಿ ಮುದ್ದೇಶ, ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಶಿವಕುಮಾರ ಕಣಸುಗಿ, ಬಳ್ಳಾರಿಯ ಕೃಷ್ೞದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರಾಕೇಶ್ ವಿ. ತಾಳಿಕೋಟೆ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.