ಬಳ್ಳಾರಿ

ಕನ್ನಡ ವಿವಿಯ ಪ್ರಾಧ್ಯಾಪಕ ರವೀಂದ್ರನಾಥಗೆ ಸಂಶೋಧನ ಶ್ರೀ ಪ್ರಶಸ್ತಿ

ಕನ್ನಡ ವಿವಿಯ ಪ್ರಾಧ್ಯಾಪಕ ರವೀಂದ್ರನಾಥಗೆ ಸಂಶೋಧನ ಶ್ರೀ ಪ್ರಶಸ್ತಿ

ಬಳ್ಳಾರಿ 08:  ಕರ್ನಾಟಕ ಇತಿಹಾಸ ಅಕಾಡೆಮಿ ಕೊಡಮಾಡಲ್ಪಡುವ ಸಂಶೋಧನಾ ಪ್ರಶಸ್ತಿಗೆ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಡಾ. ಕೆ.ರವೀಂದ್ರನಾಥ ಅವರು ಭಾಜನರಾಗಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ವಿ.ಗೌರಮ್ಮ ಹಾಗೂ ಗಂಗಾಧರಯ್ಯ ಅವರ ಹೆಸರಿನಲ್ಲಿ ಮಕ್ಕಳಾದ ಡಾ.ಎಂ.ಜಿ.ನಾಗರಾಜ, ಪದ್ಮವಿರೂಪಾಕ್ಷಯ್ಯ ಮತ್ತು ಎಂ.ಜಿ.ಚಂದ್ರಕಾಂತ್ ಇವರು ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಸ್ಥಾಪಿಸಿರುವ "ಸಂಶೋಧನಶ್ರೀ ಪ್ರಶಸ್ತಿ" ಸಂಶೋಧನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿದೆ.  

ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 25 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ಡಾ.ಕೆ.ರವೀಂದ್ರನಾಥ ಅವರು ಶಾಸನ, ಹಸ್ತಪ್ರತಿ, ಹಳೆಗನ್ನಡ, ನಡುಗನ್ನಡ, ದಾಖಲು ಸಾಹಿತ್ಯ, ಶಾಸ್ತ್ರ ಸಾಹಿತ್ಯ, ಗ್ರಂಥಸಂಪಾದನೆ ಹಾಗೂ ಇತಿಹಾಸ ಸಂಸ್ಕೃತಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ 55ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರು ಸಂಶೋಧನೆಗೆ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ 2020ನೇ ಸಾಲಿನ ಸಂಶೋಧನ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.  

ಪ್ರಶಸ್ತಿಯು 15 ಸಾವಿರ ರೂಪಾಯಿ ನಗದು ಹಾಗೂ ಫಲಕ ಹೊಂದಿರುತ್ತದೆ. ಈ ವರ್ಷ ನಡೆಯಲಿರುವ 35ನೇ ಇತಿಹಾಸ ಅಕಾಡೆಮಿಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ