ಬಳ್ಳಾರಿ

ರಂಗಚಾವಡಿ - ಹೆಂಗ ನಡಕೋತಿ.. ಹಂಗ ಪಡಕೋತಿ

ರಂಗಚಾವಡಿ - ಹೆಂಗ ನಡಕೋತಿ.. ಹಂಗ ಪಡಕೋತಿ

ಹಾಸ್ಯ ಚಕ್ರವರ್ತಿ ‘ಪಕ್ಕೀರ​‍್ಪ ವರವಿ’ ಕಿವಿಮಾತು: ಕಂಪನಿ ನಾಟಕ ಕಲಾವಿದರ ಸಮ್ಮೇಳನದ ರಂಗಚಾವಡಿ ಸಂವಾದ 

ಭಪ್ಪರೇ.. ಬಳ್ಳಾರಿಯಲ್ಲಿ ಕಂಪನಿ ನಾಟಕದ ಮಾಲಿಕರ-ಕಲಾವಿದರ ಸಮಾಗಮ ಬಹಳ ಛಲೋ ನಡದೈತಿ ಇಬ್ಬರಿಗೂ ಒಂದಮಾತ ಹೇಳ್ತೀನಿ ಹೆಂಗ ನಡಕೋತೀರಿ ಹಂಗ ಪಡಕೋತೀರಿ ಎಂದು ಚಾವಡಿಯ ಯಜಮಾನರಗಿ ಕಂಪನಿ ಕಲಾವಿದರ ಸರದಾರ ಹಾಸ್ಯ ಚಕ್ರವರ್ತಿ ‘ಪಕ್ಕೀರ​‍್ಪ ವರವಿ’ ನುಡಿದರು. 

ಅವರು ಫೆ-26ರಂದು ಕಂಪನಿ ನಾಟಕ ಕಲಾವಿದರ ಸಮ್ಮೇಳನ ಅಂಗವಾಗಿ ಏರಿ​‍್ಡಸಿದ್ದ ರಂಗಚಾವಡಿ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.  

ಮೊಟ್ಟ ಮೊದಲಿನದು ‘ರಂಗಭೂಮಿ’ ಆಮ್ಯಾಲೆ ಬಂದಿದ್ದು, ‘ವ್ಯಂಗಭೂಮಿ’ ಈಗ ನಡೀತಿರೋದು ‘ಮಂಗಭೂಮಿ’ ಎಂದು ವ್ಯಾಖ್ಯಾನಿಸಿದ ವರವಿ ಅವರು ನಾಟಕ ಕಲಾವಿದರು ಮನುಷ್ಯನ ಮನಸ್ಸನ್ನು ಮೊದಲು ಮೊಬೈಲಿನಿಂದ ಕಸಗೊಳ್ಳಿ ಇದು ನಿಮಗೆ ಮಾತ್ರ ಸಾಧ್ಯ. ಇಲ್ಲದಿದ್ದರೆ ರಂಗಭೂಮಿ ನಿಮಗೆ ಒಲಿಯುವ ಬದಲು ಒದಿತೈತಿ ಎಂದು ಎಚ್ಚರಿಸಿದರು. ನಿಮ್ಮ ನಾಟಕದ ಅಡಗಿಯನ್ನು ನೀವು ದೂರ ಕುಂತು ನೋಡಿ ಆಸ್ವಾದಿಸಿರಿ. ಉಪ್ಪು, ಹುಳಿ, ಖಾರ, ಸಿಹಿ, ಒಗರು, ಕಹಿ ಎಲ್ಲ ಸರಿಯಾದ ಪ್ರಮಾಣಕ್ಕೆ ತಕ್ಕಂದಿದ್ದರೆ ನಿಮ್ಮ ನಾಟಕಕ್ಕೆ ಘಮ ಘಮ ಬೇಡಿಕೆ ಎಂದು ಮಾರ್ಮಿಕವಾಗಿ ನುಡಿದರು. 

ಮಾಲಿಕರು ಕಲಾವಿದರು ತಮ್ಮ ನಾಟಕವನ್ನು ಮೊದಲೇ ತಾವೇ ವಿಮರ್ಶೆ ಮಾಡಿಕೊಳ್ಳಬೇಕೆಂದ ಅವರು ಹುಸಿ ಆಗಮನ, ಹುಸಿ ನಿರ್ಗಮನ, ಹುಸಿ ಮಾತು, ಹುಸಿ ನೋಡಿ ಎಂದಿಗೂ ರಂಗದ ಮೇಲೆ ನಿಲ್ಲುವುದಿಲ್ಲ. ಪ್ರತಿ ಕಲಾವಿದ ಪ್ರತಿ ಹೆಜ್ಜೆ, ಪ್ರತಿ ನೋಟ, ಪ್ರತಿ ಮಾತಿನಲ್ಲೂ ತನ್ನದೇ ವೈಶಿಷ್ಟ್ಯ ಮೆರೆಯಬೇಕೆಂದು ಆಶಿಸಿದರು.  

ಅತಿ ಸಾಮಾನ್ಯ ಪ್ರೇಕ್ಷಕರೂ ಕೂಡಾ ನಿಮ್ಮ ಅಭಿಮಾನಿಗಳೇ ಎಂದ ಅವರು ತಮ್ಮ ಬಳ್ಳಾರಿ ನಾಟಕ ಪ್ರದರ್ಶನದ ಒಂದು ಘಟನೆ ವಿವರಿಸಿದರು. ಬಳ್ಳಾರಿಯಲ್ಲಿ ನಿತ್ಯ ಪ್ರದರ್ಶನ ನಡೆದಿತ್ತು. ನಾಳೆ ಈ ನಾಟಕ 250ನೇ ಹಾಗೂ ಕೊನೆ ಪ್ರದರ್ಶನ ಎಂದು ಪ್ರಕಟಿಸಲಾಯಿತು. ಒಬ್ಬ ಶ್ರೀಮಂತರ ಹತ್ತಿರ ಒಂದು ಮುದುಕಿ ಬಂದು ಯಪ್ಪಾ ಈ ಚರಿಗಿ (ತಂಬಿಗೆ)  ಇಟಗೊಂಡು 5 ರೂ ಕೊಡು, ನಾನು 249 ದಿನಾನೂ 5 ರೂ ಕೊಟ್ಟು ನಾಟಕ ನೋಡೇನಿ ಆದರೆ ಇವತ್ತಿನ ನಾಟಕ ನೋಡಾಕ ರೊಕ್ಕಿಲ್ಲ ಎಂದಳು. ಅವಳ ಬದ್ಧತೆ ಮೆಚ್ಚಿ ಹಾಗೇ 5 ರೂ ಎಂದರೂ ಬೇಡವೆಂದು ತಂಬಿಗೆ ಅಡ ಇಟ್ಟು 5 ರೂ ಟಿಕೇಟು ಪಡೆದು ನಾಟಕ ನೋಡಿದ ವಿಷಯ ಮಾಲಿಕರಿಗೆ ತಿಳಿಯಿತು. ಕೊನೆ ದೃಶ್ಯದಲ್ಲಿ ಮುದುಕಿಯನ್ನು ವೇದಿಕೆಗೆ ಕರೆದು 25 ರೂ ವಾಪಸ್ಸು ಕೊಟು ಗೌರವಿಸಲಾಯಿತು ಎಂದು ಅವರು ತಿಳಿಸಿದರು. 

ಅವರ ಮನದಾಳ ಮಾತುಗಳನ್ನು ಒಂದೊಂದಾಗಿ ಪ್ರಶ್ನಿಸುವುದರ ಮೂಲಕ ಮಹಾಂತೇಶ ಗಜೇಂದ್ರಗಡ ಹಾಗೂ ಇಲಕಲ್ಲಿನ ಉಮಾರಾಣಿ ಬಾರಿಗಿಡದ ಅವರು ಸಂವಾದಿಸಿದರು. ಆರಂಭದಲ್ಲಿ ರಂಗತೋರಣ ಅಧ್ಯಕ್ಷ ಪ್ರೊ. ಭೀಮಸೇನ ಚಾವಡಿಯ ಪಕ್ಕೀರ​‍್ಪ ವರವಿ ಅವರ ಪರಿಚಯಿಸಿ ಚಾವಡಿಗೆ ಚಾಲನೆ ನೀಡಿದರು. ಡಾ.ಬಿ.ವಿ.ರಾಜಾರಾಂ, ಡಾ. ರಾಜಪ್ಪ ದಳವಾಯಿ ಶೇಖಮಾಸ್ತರ ಮೊದಲಾದವರು ಅವರನ್ನು ಸನ್ಮಾನಿಸಿದರು. 


ಸುದ್ದಿ ಓದಿ