ಧ್ಯಾನಸ್ಥ ಮನಸ್ಥಿತಿಯ ಕಲೆಗಾರ ರಮೇಶ ಎಸ್. ಸಜ್ಜನ್
ಕಲೆ ಅಲಂಕರಣ ಸಾಮಗ್ರಿಯಲ್ಲ. ಗೋಡೆಯ ಚಂದಕ್ಕೆ ತೂಗು ಹಾಕುವ ಚಿತ್ರಪಟವಲ್ಲ. ರಮಣೀಯ ಕಥಾನಕ, ಮನೋಹರ ದೃಶ್ಯಾವಳಿಯೂ ಅಲ್ಲ. ಅದು ನಮ್ಮ ಭಾವನೆಗಳನ್ನು ಎಚ್ಚರಿಸಬೇಕು, ಅರಳಿಸಬೇಕು, ವ್ಯಕ್ತಿತ್ವ ವಿಕಸನ ಗೊಳಿಸಬೇಕೆಂಬುದು ಹಿರಿಯ ಚಿತ್ರಕಲಾವಿದ ಕೆ.ಕೆ. ಹೆಬ್ಬಾರರವರ ಅಭಿಮತ.
ಈ ಮಾತುಗಳು ಅಪ್ಪಟ ಗ್ರಾಮೀಣ ಕಲಾವಿದ ರಮೇಶ ಎಸ್. ಸಜ್ಜನರವರಿಗೆ ಅಕ್ಷರ ಸಹ ಅನ್ವಯಿಸುತ್ತವೆ. ಸಜ್ಜನರವರ ಚಿತ್ರಗಳು ವಿಕ್ಷಕರೊಂದಿಗೆ ಪಿಸುಮಾತಿಗಿಳಿಯುತ್ತವೆ. ನಲಿವ ರೇಖೆಗಳ, ಬಣ್ಣಗಳ ಮೆರವಣಿಗೆ ವೀಕ್ಷಕನ ಕಣ್ಣಿಗೆ ಹಬ್ಬದಂತಿರುತ್ತವೆ. ಸಾಮಾನ್ಯ ಜನರಿಂದ,ಪಂಡಿತ-ಪಾಮರರರಿಗೆ ಹೊಸ ಹೇಳುವಿನಿಂದ ಹೊಸ ಲೋಕಕ್ಕೆ ಕರೆದೊಯ್ಯಲು ಯಶಸ್ವಿಯಾಗುತ್ತವೆ.
ಸಿಂಧನೂರಿನ ಪಕ್ಕದ ತುರುವಿನಹಾಳ ಗ್ರಾಮದ ಪ್ರತಿಭೆ ರಮೇಶ ಸಜ್ಜನ್ ಕನ್ನಡ ದೃಶ್ಯಕಲಾ ಜಗತ್ತಿನಲ್ಲಿ ಆಧುನಿಕತೆಯ ಎಲ್ಲ ಮಜಲುಗಳನ್ನು ತೆರೆದುಕೊಳ್ಳುತ್ತಲೆ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ರಮೇಶ ಅವರದೇ ಆದ ಶೈಲಿಯ ಗತ್ತಿದೆ. ಹಸಿವು, ಅನ್ವೇಷಣೆ, ತಲ್ಲಣಗಳಿವೆ. ಕಣ್ಣಿಗೆ ಕಂಡ ದೃಶ್ಯ, ನೆನಪಿನ ಬಿತ್ತಿಗೆ ಇಳಿದು ಕುಂಚದ ಮೊನೆಯತನಕ ತರುವ ವಾಂಛೆ ಕಲಾವಿದನ ನೈಪುಣ್ಯತೆಗೆ ಹಿಡಿದ ಕೈಗನ್ನಡಿ. ಇವರ ಕುಂಚದಲ್ಲಿ ಐತಿಹಾಸಿಕ ಸ್ಥಳಗಳ ಸೊಗಡು, ಬದುಕಿನ ಮಗ್ಗಲುಗಳು, ಜನಪದರ ಸೊಗಡು, ಸಾಂಪ್ರದಾಯಿಕ ಕಲೆ, ವಿಶಿಷ್ಠ ಶೈಲಿಯ ಚಿತ್ರಗಳು ಪ್ರಧಾನವಾಗಿವೆ.
ಜಲವರ್ಣ, ಅಕ್ರ್ಯಾಲಿಕ್, ತೈಲವರ್ಣ, ರೇಖಾಚಿತ್ರಗಳ ಚಿತ್ರ ರಚಿಸುವಲ್ಲಿ ಸಿದ್ಧಹಸ್ತರು. ಇದುವರೆಗೂ ವಿವಿಧ ಮಾಧ್ಯಮಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿರುವ ಇವರು ನಮ್ಮ ನಾಡಿನ ಹೆಮ್ಮೆ.ಪ್ರಶಾಂತ ಪರಿಸರ. ತಣ್ಣಗೆ ಹರಿಯುತ್ತಿರುವ ನದಿ, ಅಶ್ವ, ಪಶು-ಪಕ್ಷಿಗಳು, ಪಾಳು ಬಿದ್ದ ಐತಿಹಾಸಿಕ ಕಟ್ಟಡಗಳು, ಕಲ್ಲುಬಂಡೆಗೆ ಅಂಟಿಕೊಂಡಿರುವ ಮರ, ಬಳ್ಳಿ, ನದಿಯ ದಡ. ಆಗಸ ಸ್ವಚ್ಛಂದವಾಗಿದೆ. ಈ ಎಲ್ಲವೂ ಯಾವುದೋ ಒಂದನ್ನು ಕಾಯುತ್ತಿವೆ. ಏನೋ ಒಂದು ಘಟಿಸಲಿದೆ. ಆಕಾಶವೂ ಅಲ್ಲಿಂದನೇ ಎಲ್ಲವನ್ನು ಗಮನಿಸುತ್ತಿದೆ; ತಂದೆಯಂತೆ! ಹೀಗೆ ನಮ್ಮೊಂದಿಗೆ ಸಂವಹಿಸುವ ಹಲವಾರು ವಿಷಯಗಳು ಇವರ ಚಿತ್ರಗಳಲ್ಲಿ ಕಾಣಬಹುದು.
ಒಂದೊಂದು ಚಿತ್ರ ಒಂದೊಂದು ಭಾವಗಳನ್ನು ಮೂಡಿಸಿ ಒಂದಿಷ್ಟು ಚಿಂತನೆಗೆ ಹಚ್ಚುತ್ತವೆ. ಸಿಂಧನೂರಿನ ನೂತನ ಲಲಿತಕಲಾ ಮಹಾವಿದ್ಯಾಲಯದಲ್ಲಿ ಕಲಿತ ರಮೇಶ ಅವರು ಅಲ್ಲಿಯೇ 2002ರಿಂದ ಪ್ರಾಂಶುಪಾಲರಾಗಿ ಚಿತ್ರಿಸುವ ಪ್ರವೃತ್ತಿಯನ್ನು ಮುಂದುವರೆಸಿದ್ದು ಹೆಮ್ಮೆಯ ಸಂಗತಿ. ನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂವಿಎ, ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಮ್ಎಫ್ಎ, ಸ್ನಾತತಕೋತ್ತರ ಪದವಿ ಪಡೆದುಕೊಂಡಿರುತ್ತಾರೆ. ಸೃಜನಶೀಲ ಕಲಾವಿದ ತನ್ನ ಮನದ ಭಾವದ ಭಿತ್ತಿಗೆ ರಂಗು ತುಂಬಿ, ಕಚಗುಳಿ ಇಟ್ಟು, ಕ್ಯಾನವಾಸಿನ ಕೆನ್ನೆ ಸವರಿದರೆ ಕಲಾ ದೇವತೆ ನಾಚಿ, ನವಿರಾಗಿ, ಲಜ್ಜೆಯಿಂದ ಹೆಜ್ಜೆಯ ಮೇಲೆ ಹೆಜ್ಜೆ ಇಡುತ ಯಾವುದೆ ಆಡಂಬರ, ಬಿಂಕು-ಬಿನ್ನಾಣಗಳಲ್ಲದೆ ರಮೇಶ ಸಜ್ಜನ್ ದೋಣಿಯಲ್ಲಿ ವಿಹರಿಸುತ್ತಾ, ಬಣ್ಣಗಳಿಗೆ ‘ಫಿದಾ’ ಆಗಿ ಬಿಳಡುತ್ತಾಳೆ. ಕಲಾ ದೇವತೆ ತನ್ನ ವನಪು, ವೈಯ್ಯಾರ, ವೈರಾಗ್ಯದ ನಡುವೆ ಬಳಕುವ ರೇಖಾಳಿಗೆ ಹೊಸ ಭಾಷ್ಯ ಬರೆಯುತ್ತಿದ್ದಾರೆ ನವ್ಯ, ನವ್ಯೋತ್ತರಗಳ ಗೊಡವೆ ಬಿಟ್ಟು ಕಲೆಯ ಆಶೋತ್ತರಗಳಿಗೆ ಸ್ಪಂದಿಸುವ ಗುಣ ದಕ್ಕಿದೆ. ಚಿತ್ರವೆಂಬ ನಿಶಬ್ಧ ಕವಿತೆಯನ್ನು ಬರೆಯುವ ಸಜ್ಜನ್ ರಿಗೆ ನಿಶಬ್ಧ ಕವಿತೆಯೆಂಬ ಚಿತ್ರವನ್ನು ಬಿಡಿಸುವ ಕಲೆ ಕರತಲಾಮಲಕವಾಗಿದೆ.
ಬದುಕು ವ್ಯಾಪಾರ, ಧ್ಯಾನಸ್ಥ ಸ್ಥಿತಿ, ಹೊಸ ತಲ್ಲಣಗಳ ಹಪಾಹಪಿಗಳೆ ರಮೇಶರ ಕಲೆಯ ವೀನೂತನತೆ ಕಾಪಿಟ್ಟುಕೊಂಡು ಬದುಕಿನ ಮುಖವಾಡ ಕಳಚಿ ಸರಳರೇಖೆಗಳಲ್ಲಿ ನೀಗೂಡ ಜಗತ್ತಿನ ಸಜ್ಜನಗೊಳಿಸುವ ತುಡಿತವಿದೆ. ರಮೇಶ ಅವರ ಚಿತ್ರಗಳಲ್ಲಿ ಬಿಸಿಲೂರಿನ ಝಳವಿದೆ. ಜೊತೆಗೆ ಸಿಂಧನೂರಿನ ವೈಭವ, ಸಂಸ್ಕೃತಿ ನಾಟ್ಯ ಲೋಕ ಅಕ್ಷರ ಲೋಕ, ಬಣ್ಣದ ಲೋಕ, ಕುಂಚ ಲೋಕದ ಗೆಳೆಯರು ರಮೇಶ ಅವರ ಕಲೆಯನ್ನು ಆಸ್ವಾಧಿಸಿದ್ದಾರೆ. ವಿವಿಧ ಕ್ಷೇತ್ರದ ಹಿರಿಯರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಚಿಕ್ಕಂದಿನಿಂದಲೂ ಬಣ್ಣಗಳು ನನ್ನನ್ನು ಸೆಳೆದವು- ಎನ್ನುವ ಇವರು, ನಿರ್ದಿಷ್ಟ ಥೀಮ್ ಇಟ್ಟುಕೊಂಡು ಚಿತ್ರಗಳನ್ನು ರಚಿಸುವಲ್ಲಿಯೂ ಸಿದ್ಧರು. ಇವರಿಗೆ ಬದುಕಿನ ಮಗ್ಗಲುಗಳೇ ಪ್ರೇರಣೆಯಂತೆ. ಇವರ ಚಿತ್ರಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆ ಹಾಗೂ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಿಸಿಲೂರಿನ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕ ನಗರ ಪ್ರದೇಶದಲ್ಲಿ ಚಿತ್ರಕಲಾ ಕ್ಷೇತ್ರದ ಬೆಳವಣಿಗೆಗೆ ಹಗಲಿರುಳು ಗೌರವ ಸಂಭಾವನೆ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ನಾಡಿನಾದ್ಯಾಂತ ಇವರ ಶಿಷ್ಯಂದಿರು ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮಿರುತ್ತಾರೆ. ಚಿತ್ರಕಲಾ ಶಿಕ್ಷಣ ಎಲ್ಲಾ ಶಿಕ್ಷಣಕ್ಕೂ ತಾಯಿ ಬೇರು.
ಆದರೆ ಚಿತ್ರಕಲಾ ಶಿಕ್ಷಣದ ಕಡೆಗಣನೆಯ ಬಗ್ಗೆ ತುಂಬಾ ಬೇಸರವಿದೆ. “ಮಕ್ಕಳು ಮಾನಸಿಕವಾಗಿ ಮತ್ತು ಭೌತಿಕವಾಗಿ ಬೆಳವಣಿಗೆಯಾಗಲು ಚಿತ್ರಕಲಾ ಶಿಕ್ಷಣದ ಅಗತ್ಯವಿದೆ. ಚಿತ್ರಕಲೆಯನ್ನು ಕಲಿತ ಮಕ್ಕಳು ಇತರೆ ಮಕ್ಕಳಿಗಿಂತ ಹೆಚ್ಚು ಸೃಜನಶೀಲರಾಗಿರುತ್ತಾರೆ,” ಎಂದು ಕಲಾವಿದ ರಮೇಶ ಸಜ್ಜನ್ ರವರ ಅಭಿಪ್ರಾಯ..ಓಪಚಾರಿಕ ಶಿಕ್ಷಣದ ಸ್ವರೂಪ ಪಡೆದ ಚಿತ್ರಕಲಾ ಶಿಕ್ಷಣಕ್ಕೆ ಹೊಸ ರೂಪು ನೀಡಲು ಹಾಗೂ ಅದರ ಮಹತ್ವ ಹೆಚ್ಚಿಸಲು ಸರಕಾರ ಗಮನಹರಿಸಬೇಕು.. ಪ್ರತಿಯೊಂದು ಶಾಲೆಗೆ ಚಿತ್ರಕಲಾ ಶಿಕ್ಷಕರ ನೇಮಕ ಮಾಡಬೇಕೆನ್ನುವರು.. ಕಲಾವಿದರನ್ನು ಅಭಿನಂದಿಸಬೇಕೆ. ಹಾಗಾದ್ರೆ 7353092770 ಗೆ ಹಲೋ ಎನ್ನಿ...
- ನಾಮದೇವ ಕಾಗದಗಾರ
ಚಿತ್ರಕಾರರು, ರಾಣೆಬೆನ್ನೂರ
- * * * -