ರಾಮಲಿಂಗಯ್ಯ ಶ್ರೀಗಳ ಕಾರ್ಯ ಶ್ಲಾಘನೀಯ: ಹಿರೇಮಠ
ಲೋಕದರ್ಶನ ವರದಿ
ತಾಳಿಕೋಟಿ: ಜಂಗಮ ಸಮಾಜದ ಬಾಂಧವರು ಉನ್ನತ ಸಂಸ್ಕಾರಗಳನ್ನು ಬೆಳೆಸಿಕೊಂಡು ದುರಭ್ಯಾಸಗಳಿಂದ ದೂರ ಇರುವಂತಾಗಲು ಹಾಗೂ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ತಪ್ಪದೆ ಪಾಲಿಸುವರಂತಾಗಬೇಕು ಎಂಬ ಕಳಕಳಿ ಹೊತ್ತು ಇಡೀ ತಾಲೂಕಿನಾದ್ಯಂತ ಜಂಗಮ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿರುವ ಶ್ರೀ ರಾಮಲಿಂಗ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ಶಿಕ್ಷಕ ವಿಜಯ ಹಿರೇಮಠ ಹೇಳಿದರು.
ಜಂಗಮ ಜಾಗೃತಿ ಅಭಿಯಾನದ ಅಂಗವಾಗಿ ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ಪರಮ ಪೂಜ್ಯ ಶ್ರೀ ರಾಮಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಮಾಜ ಬಾಂಧವರ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವಹಿದಿ ಮಾತನಾಡಿದ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಧರ್ಮವನ್ನು ಯಾರು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಬಾರದು. ಇಂದು ಜಂಗಮ ಸಮಾಜವು ಗುರುವಿನ ಸ್ಥಾನವನ್ನು ಪಡೆದ ಸಮಾಜವಾಗಿದೆ. ಇದು ಸಮಾಜದ ಇತರ ಸಮುದಾಯಗಳಿಗೆ ಮಾದರಿಯಾಗಬೇಕು. ಅವರನ್ನು ಉನ್ನತ ನೈತಿಕ ಮೌಲ್ಯಗಳ ಆಧಾರದಲ್ಲಿ ಸಂಘಟಿಸುವ ಅಗತ್ಯ ಇದೆ. ಈ ಉದ್ದೇಶಕ್ಕಾಗಿಯೇ ನಾನು ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ರಾಮಲಿಂಗಯ್ಯ ಶ್ರೀಗಳ ನೇತೃತ್ವದಲ್ಲಿ ಸುಮಾರು 7 ಗ್ರಾಮಗಳಲ್ಲಿ ಜಂಗಮ ಸಮಾಜದ ಗ್ರಾಮ ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಗ್ರಾಮದ ಗಣ್ಯರು, ಸಮಾಜದ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.