ರಕ್ಷಾಬಂಧನ: ಶಾಸಕರಿಗೆ ರಾಖಿ ಕಟ್ಟಿದ ಬಿಜೆಪಿ ಮಹಿಳಾ ಮೋರ್ಚಾ
ಬೀದರ್, ಆ.28: ಪ್ರೀತಿ, ವಾತ್ಸಲ್ಯ, ವಿಶ್ವಾಸ ಹಾಗೂ ಸಹೋದರತ್ವದ ಸಂಕೇತವಾದ ರಕ್ಷಾಬಂಧನವನ್ನು ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಆತ್ಮೀಯವಾಗಿ ಆಚರಿಸಿದರು. ನಗರದ ಪ್ರತಾಪನಗರದಲ್ಲಿರುವ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಕಚೇರಿಯಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಶಾಸಕರಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶೈಲೇಂದ್ರ ಬೆಲ್ದಾಳೆ, ರಕ್ಷಾಬಂಧನ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವ ಹೊಂದಿದ್ದು, ಸಹೋದರ- ಸಹೋದರಿ ನಡುವಿನ ಪ್ರೀತಿ, ವಿಶ್ವಾಸ, ಕಾಳಜಿ ಹಾಗೂ ರಕ್ಷಣೆಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಮಹಿಳೆಯರ ಸಬಲೀಕರಣ, ಸುರಕ್ಷತೆ ಹಾಗೂ ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಉತ್ತೇಜಿಸಬೇಕಾಗಿದೆ ಎಂದು ಹೇಳಿದರು.
ಮಹಿಳಾ ಮೋರ್ಚಾ ಪದಾಧಿಕಾರಿಗಳು ಮಾತನಾಡಿ, ಶಾಸಕರೊಂದಿಗೆ ಸಹೋದರತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ರಕ್ಷಾಬಂಧನ ಆಚರಿಸಲಾಗಿದೆ. ಜನಸೇವಾ ಕಾರ್ಯಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಹೇಮಾ ತುಕ್ಕಾರಡ್ಡಿ, ಜಿಲ್ಲಾ ಕಾರ್ಯದರ್ಶಿ ಸಂತೋಷಿ ನಿಡವಂಚಾ, ಮಂಡಳ ಮಹಿಳಾ ಮೋರ್ಚಾ ಅಧ್ಯಕ್ಷೆ ಗುಂಡಮ್ಮ ಬುಧೇರಾ, ಪ್ರಧಾನ ಕಾರ್ಯದರ್ಶಿ ಸುಜಾತಾ ಮಂದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾಗಿ ಸಹಾಯಕ ನಾಗೇಶ್ ಸಿದ್ದಾ ಕಾರ್ಯನಿರ್ವಹಿಸಿದರು.