ರಾ ಚಿತ್ರ ಆರಂಭ : ಮಂಜುನಾಥ್ ಕೆ.ಪಿ ನಿರ್ದೇಶನ
ಬೆಂಗಳೂರು, ನ. 02: ವಿಭಿನ್ನ ಕಥಾಹಂದರದ "ರಾ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ವಿನುತ ಮಂಜುಳಾ ಆರಂಭ ಫಲಕ ತೋರಿದರು. ಉದ್ಯಮಿ ಸೂರಜ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಶಾಂಭವಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿನುತ ಮಂಜುಳಾ ಹಾಗೂ ಬಂಕ್ ಮಂಜುನಾಥ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಹಾಗೂ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಯಕ ನಟನಾಗಿ ಸಂತೋಷ್ ಬಾಲರಾಜ್, ರಿಯಾ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆದಿದೆ.
ಖ್ಯಾತ ನಟ ಸಾಯಿಕುಮಾರ್, "ಸಲಗ" ಖ್ಯಾತಿಯ ಕಾಕ್ರೋಜ್ ಸುಧೀ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಜನಪ್ರಿಯ ಸ್ಥಳಗಳಲ್ಲಿ ತೊಂಬತ್ತು ದಿನಗಳ ಚಿತ್ರೀಕರಣ ನಡೆಯಲಿದೆ.