ಮನರಂಜನೆ

ಹುಟ್ಟುಹಬ್ಬಕ್ಕೆ ಯಾರೂ ಬರಬೇಡಿ, ಇದ್ದಲ್ಲಿಂದಲೇ ಹಾರೈಸಿ : ಯಶ್

ಹುಟ್ಟುಹಬ್ಬಕ್ಕೆ ಯಾರೂ ಬರಬೇಡಿ, ಇದ್ದಲ್ಲಿಂದಲೇ ಹಾರೈಸಿ : ಯಶ್

ಬೆಂಗಳೂರು, ಜ 06 :ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಎರಡೇ ದಿನ ಬಾಕಿಯಿದೆ.  ಆದರೆ ಜನ್ಮದಿನಕ್ಕೆ ಯಾರೂ ಬರವೇಡಿ, ಇರುವ ಸ್ಥಳದಿಂದಲೇ ಶುಭ ಹಾರೈಸಿ ಎಂದು ಯಶ್ ಮನವಿ ಮಾಡಿದ್ದಾರೆ.  ಆದಾಗ್ಯೂ  ಅಭಿಮಾನಿಗಳು ತಮ್ಮದೆ ರೀತಿಯಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ.ಯಶ್ ಜನ್ಮದಿನದಂದು ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಈಗಾಗಲೇ ಘೋಷಣೆ ಮಾಡಿದ್ದು,  ಇಡೀ ಭಾರತೀಯ ಚಿತ್ರರಂಗ ಟೀಸರ್ ಗಾಗಿ ಎದುರು ನೋಡುತ್ತಿದೆ. “ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಣೆ ಬೇಡ, ನೀವೆಲ್ಲಿದ್ದೀರೊ ಅಲ್ಲಿಂದನೆ ಆಶೀರ್ವಾದ ಮಾಡಿ ಎಂದು ಯಶ್ ಮನವಿ ಮಾಡಿಕೊಂಡಿದ್ದಾರೆ.

'ನನಗೆ ನಿಮ್ಮ ಆರೋಗ್ಯ ನಿಮ್ಮ ಕುಟುಂಬದವರ ಆರೋಗ್ಯ ಹೆಚ್ಚು ಮುಖ್ಯ, ಹಾಗಾಗಿ ಈ ಬಾರಿ ಗುಂಪು ಗೂಡಿ ಹುಟ್ಟುಹಬ್ಬ ಆಚರಿಸುವ ಬದಲಿಗೆ, ತಾವುಗಳು ಎಲ್ಲಿ ಇರುತ್ತೀರೋ ಅಲ್ಲಿಂದಲೇ ಶುಭ ಹಾರೈಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳಿಸಿ' ಎಂದಿದ್ದಾರೆ.ಹುಟ್ಟುಹಬ್ಬದ ದಿನವೇ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಟೀಸರ್ ಅನ್ನು ನೋಡಿ ಆನಂದಿಸಿ, ಪ್ರತಿಕ್ರಿಯಿಸಿ ಎಂದು ಮನವಿ ಮಾಡಿದ್ದಾರೆ. ಇದೇ ಸಮಯದಲ್ಲಿ ಅಭಿಮಾನಿಗಳು ಸಹ ಯಶ್ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸುತ್ತಿದ್ದಾರೆ. 'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ'ದ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಕೆಜಿಎಫ್-2 ಟೀಸರ್ ರಿಲೀಸ್ ಆಗಲಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಗರುಡ ರಾಮ್ ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ 2021ನೇ ಸಾಲಿನ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ರಕ್ತ ದಾನ, ಅನ್ನ ದಾನ ಸೇರಿದಂತೆ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಯಶ್ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.  

  


ಸುದ್ದಿ ಓದಿ