ಮೊಘಲರನ್ನು ಹಿಮ್ಮೆಟ್ಟಿಸಿದ ರಾಣಿ ಕೆಳದಿ ಚೆನ್ನಮ್ಮ
ಕೆಳದಿ ಚೆನ್ನಮ್ಮ 1672 ರಿಂದ 1696 ರವರೆಗೆ ಅಂದರೆ 25 ವರ್ಷಗಳವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ಆಕೆ ಕನ್ನಡದ ಹೆಣ್ಣು ಹುಲಿ. ಆಕೆ ಶತ್ರು ಪಾಳಯಕ್ಕೆ ಬೆಂಕಿ ಚಂಡಿನಂತಿದ್ದ, ವೀರಾಧಿವೀರರನ್ನೆ ಯುದ್ಧ ರಂಗದಲ್ಲಿ ಮಂಡಿಯೂರುವಂತೆ ಮಾಡಿದ್ದ, ಓರಂಗಜೇಬ್ ಹಾಗೂ ಆತನ ಮಗನನ್ನೇ ಸೆರೆಹಿಡಿದು ಕಂಗಾಲಾಗಿಸಿ ಪ್ರಾಣಭಿಕ್ಷೆ ನೀಡಿದ ವೀರ ವನಿತೆ. ಶತ ದಿಕ್ಕುಗಳಿಂದ ಶತ್ರುಗಳು ಮುಗಿಬಿದ್ದಾಗಲೂ ಅವರನ್ನು ಸೋಲಿಸಿ ತನ್ನ ಸಂಸ್ಥಾನವನ್ನು ಉಳಿಸಿಕೊಂಡ ರಣ ಚತುರೆಯಾಕೆ.
ತಂದೆ ಕೋಟಿಪುರ ಸಿದ್ದಪ್ಪ ಶೆಟ್ಟಿ. ಬಾಲ್ಯದಲ್ಲಿಯೇ ಆಕೆಗೆ ಶಸ್ತ್ರ ಶಾಸ್ತ್ರ ವಿದ್ಯೆ ಕಲಿಸಿ ಕೊಟ್ಟಿದ್ದರು. ಸೋಮಶೇಖರ ನಾಯಕ ಕೆಳದಿಯ ರಾಜಕುಮಾರ. ಶಿವಪ್ಪ ನಾಯಕನ ಸುಪುತ್ರ. ದೈವ ಭಕ್ತ. ಒಂದು ದಿನ ರಾಮೇಶ್ವರ ಜಾತ್ರೆಗೆಂದು ತನ್ನ ಗೆಳೆಯರೊಂದಿಗೆ ಹೋದಾಗ ಆತನ ಕಣ್ಣಿಗೆ ಬಿದ್ದ ಚೆಲುವೆಯೇ ಚೆನ್ನಮ್ಮ. ಮದುವೆಯಾದರೆ ಅವಳನ್ನೇ ಎಂದು ನಿರ್ಧರಿಸಿಬಿಟ್ಟ ಸೋಮಶೇಖರ. ಮನೆಯಲ್ಲಿ ಆಕೆ ರಾಜಮನೆತನದವಳಲ್ಲವೆಂಬ ವಿರೋಧ ವ್ಯಕ್ತವಾದಾಗಲೂ ಆತ ಯಾರನ್ನೂ ಕೇಳಲಿಲ್ಲ. ಚೆನ್ನಮ್ಮಳ ಮನೆಗೆ ಮಂತ್ರಿಯನ್ನು ಕಳುಹಿಸಿ ಆಕೆಯ ತಂದೆಯನ್ನು ಒಪ್ಪಿಸಿದ. ನಂತರ 1667ರಲ್ಲಿ ಅವರಿಬ್ಬರ ವಿವಾಹ ಅರಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಮದುವೆಯಾದ ಮೇಲೆ ಚೆನ್ನಮ್ಮ ಯುದ್ಧ ಕಲೆಯನ್ನು ಕಲಿತು ಅದರಲ್ಲಿ ಪಾರಂಗತಳಾದಳು. ಸ್ವಲ್ಪ ಸಮಯದಲ್ಲಿ ಆಯುಧಗಳ ಬಳಕೆಯಲ್ಲಿ ನಿಪುಣಳಾದಳು. ಪತಿಯಿಂದ ಆಡಳಿತದ ಅನುಭವ ಪಡೆದು ಶೀಘ್ರದಲ್ಲೇ ಆಕೆ ರಾಜಕೀಯ ಮತ್ತು ರಾಜ್ಯ ಕಾರ್ಯದಲ್ಲಿ ಚೆನ್ನಾಗಿ ಪಾರಂಗತಳಾಗುತ್ತಾಳೆ. ಸಕಾಲದಲ್ಲಿ ಪತಿಗೆ ಸಲಹೆ ಸೂಚನೆಗಳನ್ನು ಕೊಡತೊಡಗುತ್ತಾಳೆ.ಸೋಮಶೇಖರ ಉತ್ತಮ ಆಡಳಿತಗಾರನಿದ್ದೂ ಕೂಡ ಲೋಲುಪನಾಗಿರುತ್ತಾನೆ. ರಾಜ ನರ್ತಕಿ ಕಲಾವತಿಯಲ್ಲಿ ಅನುರಕ್ತನಾಗುತ್ತಾನೆ. ಮುಂದೆ ರಾಜ್ಯವನ್ನು ಕಡೆಗಣಿಸಿ ಅವಳಲ್ಲಿಯೇ ಇರಲಾರಂಭಿಸುತ್ತಾನೆ. ಇದು ಚೆನ್ನಮ್ಮಳ ಚಿಂತೆಗೆ ಕಾರಣವಾಗುತ್ತದೆ. ಕೊನೆಗೆ ಆಕೆಯ ಆತಂಕ ನಿಜವಾಗುತ್ತದೆ. ಬಿಜಾಪುರದ ಸುಲ್ತಾನನ ಕಣ್ಣು ಬಿದನೂ ರಿನ ಮೇಲೆ ಬೀಳುತ್ತದೆ. ಆತ ಸರ್ವಸಮದ್ಧನಾಗಿ ಬಿದನೂರಿಗೆ ಸೈನ್ಯವನ್ನು ಕಳಿಸುತ್ತಾನೆ. ಮಂತ್ರಿ ಗಳು, ಸೇನಾ ನಾಯಕರು ಮಗು ಒಂದನ್ನು ದತ್ತು ಪಡೆದು ರಾಜ್ಯಭಾರ ಮಾಡಲು ಸಲಹೆ ನೀಡುತ್ತಾರೆ. ಮಕ್ಕಳಿಲ್ಲದ ಚೆನ್ನಮ್ಮಳಿಗೆ ಈ ಸಲಹೆ ರುಚಿಸುವುದಿಲ್ಲ. ರಾಜ್ಯವನ್ನು ಕಾಪಾಡುವಂತೆ ಎಷ್ಟೇ ಬೇಡಿಕೊಂಡರೂ ಸೋಮಶೇಖರ ಕ್ಯಾರೇ ಎನ್ನುವುದಿಲ್ಲ. ರಾಜನರ್ತಕಿಯನ್ನು ಬಿಟ್ಟು ಬರುವುದೇ ಇಲ್ಲ. ಹೀಗಾಗಿ ಕಷ್ಟಕಾಲ ಅರಿತ ಕೆಳದಿ ಚೆನ್ನಮ್ಮ ಎಚ್ಚರಿಸಲು ಬಂದಿದ್ದ ಜನೋಪಂತ್ ಎಂಬ ಸುಲ್ತಾನನ ರಾಯಭಾರಿಗೆ ಮೂರು ಲಕ್ಷ ಕೊಟ್ಟು ತಕ್ಷಣಕ್ಕೆ ಯುದ್ಧ ನಿಲ್ಲಿಸುತ್ತಾಳೆ. ಆದರೆ ರಾಯಭಾರಿ ರಾಜನರ್ತಕಿಯ ಸಾಕು ತಂದೆ ಭರಮ ಮಾವುತನನ್ನು ಕೂಡ ಭೆಟ್ಟಿಯಾಗಿ ಅವನ ಮೂಲಕ ಸೋಮಶೇಖರನನ್ನು ಕೊಲ್ಲಿಸುತ್ತಾನೆ. ಇದು ನಡೆದದ್ದು ಕ್ರಿಸ್ತಶಕ 1677 ರಲ್ಲಿ. ಮದುವೆಯಾದ 10 ವರ್ಷದಲ್ಲಿಯೇ ವಿಧವೆಯಾಗುತ್ತಾಳೆ ಚೆನ್ನಮ್ಮ. ಚೆನ್ನಮ್ಮಳ ಕಾಲದಲ್ಲಿ ಸತಿ ಸಹಗಮನ ಪದ್ಧತಿ ಉತ್ತುಂಗದಲ್ಲಿತ್ತು.ಪತಿಯ ನಿಧನದಿಂದ ಚಿತೆ ಏರಬೇಕಾಗಿ ಬಂದಾಗ ಅದನ್ನು ತೀವ್ರವಾಗಿ ವಿರೋಧಿಸುತ್ತಾಳೆ. ರಾಜಾರಾಮ್ ಮೋಹನ್ ರಾಯರಿಗಿಂತ ನೂರು ವರ್ಷ ಮೊದಲೇ ಸತಿ ಸಹಗಮನದ ವಿರುದ್ಧ ಧನಿಯೆತ್ತಿದ ದಿಟ್ಟೆ ಕೆಳದಿ ಚೆನ್ನಮ್ಮ.
ದುಡ್ಡು ಕೊಟ್ಟರೂ ಮುಂದೆ ಬಿಜಾ ಪುರದ ಸುಲ್ತಾನನ ಸೇನೆ ಬಿದನೂರಿಗೆ ಮುತ್ತಿಗೆ ಹಾಕುತ್ತದೆ. ಕೆಳದಿ ಸಂಸ್ಥಾನದ ಅಧೀನದಲ್ಲಿ ಬಿದನೂರಿನಲ್ಲಿ ಒಂದು ಕೋಟೆ ಇದ್ದರೆ, ಭುವನಗಿರಿಯಲ್ಲಿ ಒಂದು ಕೋಟೆ ಇರುತ್ತದೆ. ಸುಲ್ತಾನನ ದೊಡ್ಡ ಸೈನ್ಯದ ಎದುರು ಕಲಿತನದಿಂದ ಹೋರಾಡಿದರೂ ಕೂಡ ಹೆಚ್ಚು ಕಾಲ ಸುಲ್ತಾನನ ಸೈನ್ಯವನ್ನು ಎದುರಿಸಲಾಗದೇ ಹೋಯಿತು. ರಾಣಿ ಚೆನ್ನಮ್ಮ ಬಿದನೂರು ಭಂಡಾರದಲ್ಲಿದ್ದ ಎಲ್ಲ ಧನ ಕನಕ ಅಮೂಲ್ಯ ವಸ್ತುಗಳನ್ನೆಲ್ಲಾ ಭುವನಗಿರಿಗೆ ಸಾಗಿಸಿದಳು. ಬಿದನೂರನ್ನು ವಶಕ್ಕೆ ಪಡೆದ ಸುಲ್ತಾನನ ಬಿಜಾಪುರ ಸೇನೆ ಖಾಲಿ ಭಂಡಾರವನ್ನು ಕಂಡು ನಿರಾಶಗೊಂಡಿತು.
ಬಸಪ್ಪ ನಾಯಕನನ್ನು ದತ್ತು ಪಡೆದ ಸಂದರ್ಭದಲ್ಲಿ ಮಂತ್ರಿ ತಿಮ್ಮಣ್ಣನಾಯಕನಿಗೂ ಹಾಗೂ ಚೆನ್ನಮ್ಮಳಿಗೂ ಮನಸ್ತಾಪವೇರ್ಪಟಟಿರುತ್ತದೆ. ಯಾವಾಗ ಬಿದನೂರು ಸುಲ್ತಾನನ ಕೈವಶವಾಗಿದೆ ಎಂಬ ಸುದ್ದಿ ತಿಳಿದಾಕ್ಷಣ ಮಂತ್ರಿ ತಿಮ್ಮಣ್ಣ ಚೆನ್ನಮ್ಮಳ ಹತ್ತಿರ ಓಡಿ ಬಂದು ಕ್ಷಮೆ ಬೇಡುತ್ತಾನೆ. ಇಬ್ಬರೂ ಒಂದಾಗಿ ಬಿದನೂರ್ಗೆ ಮುತ್ತಿಗೆ ಹಾಕುತ್ತಾರೆ. ಇದನ್ನು ನೀರೀಕ್ಷಿಸದ ಸುಲ್ತಾನನ ಸೈನ್ಯದ ಮೇಲೆ ಚೆನ್ನಮ್ಮಳ ಸೈನ್ಯ ಮುಗಿಬಿದ್ದು ಸದೆಬಡಿಯುತ್ತದೆ. ರಾಣಿಯ ಈ ತಂತ್ರಕ್ಕೆ ಸುಲ್ತಾನನ ಸೈನ್ಯ ದೂರ ಓಡಿ ಹೋಗುತ್ತದೆ. ಮತ್ತೆ ಬಿದನೂರು ಕೆಳದಿ ರಾಣಿಯ ಕೈವಶವಾಗುತ್ತದೆ.
ಕೆಳದಿ ಚೆನ್ನಮ್ಮ ರಾಜಕೀಯ ಚತುರತೆಯಲ್ಲೂ ಮುಂದಿದ್ದಳು ಎಂದು ತೋರಿಸುವ ನಿದರ್ಶನ ಒಂದಿದೆ. ಛತ್ರಪತಿ ಶಿವಾಜಿಯ ಮೊದಲ ಮಗ ಸಂಭಾಜಿಯನ್ನು ಸೆರೆ ಹಿಡಿದು ಚಿತ್ರಹಿಂಸೆ ಮಾಡಿ ಕೊಲ್ಲಲಾಗುತ್ತದೆ. ಎರಡನೇ ಮಗ ರಾಜರಾಮನನ್ನೂ ಕೊಂದು ಮರಾಠಾ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಬೇಕೆಂಬ ಹವಣಿಕೆ ಓರಂಗಜೇಬನದು. ಹೀಗಾಗಿ ಹೆದರಿದ ರಾಜಾರಾಮ ಸನ್ಯಾಸಿಯ ವೇಷ ತೊಟ್ಟು ರಕ್ಷಣೆಗಾಗಿ ಕೆಳದಿ ಚೆನ್ನಮ್ಮಳ ಬಳಿಗೆ ಬರುತ್ತಾನೆ. ಚೆನ್ನಮ್ಮ ಅವನಿಗೆ ಅಭಯ ನೀಡುತ್ತಾಳೆ. ಓರಂಗಜೇಬನ ಸೈನ್ಯ ಕೆಳದಿಯ ಗಡಿಗೆ ಬಂದು ನಿಲ್ಲುತ್ತದೆ. ಕಂಗೆಡದ ರಾಣಿ ವೀರಾವೇಶದಿಂದ ಹೋರಾಡುತ್ತಾಳೆ. ಆಗ ಮಳೆಗಾಲವಾದ್ದರಿಂದ ಮಲೆನಾಡಿನ ಮಳೆಗೆ ಬಸವಳಿದ ಮೊಘಲ್ ಸೈನ್ಯ ಆಗಲೇ ಸೋಲು ಅನುಭವಿಸುತ್ತಿರುತ್ತದೆ. ಇನ್ನು ಓಡಿ ಹೋಗುವುದೊಂದು ಬಾಕಿ ಇರುತ್ತದೆ. ಅದೇ ಸಂದರ್ಭದಲ್ಲಿ ಓರಂಗಜೇಬನನ್ನು ಮತ್ತು ಆತನ ಮಗ ಮೊಹಮ್ಮದ್ ಅಜಂ ಶಾ ಇಬ್ಬರನ್ನು ಸೆರೆಯಾಳನ್ನಾ ಗಿಸುತ್ತಾಳೆ ರಾಣಿ. ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಾರೆ. ಈ ಇಬ್ಬರನ್ನು ಕೊಂದು ಮೊಘಲ್ ಸಾಮ್ರಾಜ್ಯವನ್ನು ತನ್ನದಾಗಿಸಿಕೊಳ್ಳಬಹುದಾಗಿತ್ತು ಕೆಳದಿ ರಾಣಿ. ಆದರೆ ಆಕೆ ಹಾಗೆ ಮಾಡದೇ ದೊಡ್ಡತನ ಮೆರೆಯುತ್ತಾಳೆ. ಇಬ್ಬರನ್ನು ಕ್ಷಮಿಸಿಬಿಡುತ್ತಾಳೆ. ಈ ಕ್ಷಮೆಯೇ ಹಿಂದೂಗಳಿಗೆ ಘೋರವಾಗಿ ಪರಿಣಮಿಸಿದ್ದು ಸುಳ್ಳಲ್ಲ.!
ಮೈಸೂರಿನ ಒಡೆಯರೊಂದಿಗೂ ಮೂರು ಸಲ ಯುದ್ಧವಾದರೂ ಎರಡು ಸಲ ವಿಜಯ ಗಳಿಸಿದ್ದು ಚೆನ್ನಮ್ಮನೇ..ಆದರೆ ಕೆಳದಿ ರಾಣಿ ಎಷ್ಟು ಚಾಣಾಕ್ಷಮತಿ ಎಂದರೆ ಮೂರನೇ ಸಲದ ಯುದ್ಧದಲ್ಲಿ ಜಯ ಗಳಿಸಿದರೂ ಕೂಡ ವೈರಿಪಡೆಯ ಸೈನ್ಯವನ್ನು ಸೆರೆಯಾಳಾಗಿಸದೇ ಮತ್ತೆ ಮರಳಿ ಕಳಿಸಿ ದೊಡ್ಡತನ ಮೆರೆದಳು.ಇದರಿಂದಾಗಿ ಒಡೆಯರ ಪ್ರೀತಿಗೆ ಪಾತ್ರಳಾದ ಚೆನ್ನಮ್ಮ ಕೊನೆಯವರೆಗೂ ಅವರೊಂದಿಗೆ ಸ್ನೇಹವನ್ನು ಪರಿಪಾಲಿಸಿದಳು.ವೈರಿ ಮನಗೆದ್ದು ಬೀಗಿದಳು.
ಪೋರ್ಚುಗೀಸರೊಂದಿಗೂ ವ್ಯಾಪಾರ ವಹಿವಾಟನ್ನಿಟ್ಟುಕೊಂಡು ಅವರಿಗಾಗಿ ಅನೇಕ ಚರ್ಚುಗಳನ್ನು ಕೂಡ ತನ್ನ ರಾಜ್ಯದಲ್ಲಿ ನಿರ್ಮಿಸಿದಳು ಕೆಳದಿರಾಣಿ ಚೆನ್ನಮ್ಮ.
ಕೆಳದಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಒಂದು ಗ್ರಾಮ. ಅಲ್ಲಿ ಕೆಳದಿಯ ರಾಣಿ ಚೆನ್ನಮ್ಮಳ ಪ್ರತಿಮೆಯನ್ನು ನಾವು ಕಾಣಬಹುದು. ಕೆಳದಿ ಸಾಮ್ರಾಜ್ಯವು ಗೋವಾದಿಂದ ಮಲಬಾರ್ ವರೆಗೂ ಇಡೀ ಸಮುದ್ರ ತೀರದಲ್ಲಿ ವ್ಯಾಪಿಸಿತ್ತು. ಚೆನ್ನಮ್ಮ ಧೈರ್ಯ ಶೌರ್ಯದ ಜೊತೆಗೆ ಧಾರ್ಮಿಕ ನಿಲುವಿಗೂ ಹೆಸರಾದವಳು. ಬಸವಾದಿ ಶರಣರ ವಚನಗಳನ್ನು ಪಠಿಸುತ್ತ ನಿತ್ಯ ಇಷ್ಟ ಲಿಂಗ ಧ್ಯಾನ ಮಾಡುತ್ತಿದ್ದಳು. ತನ್ನ ದತ್ತು ಪುತ್ರ ಬಸಪ್ಪನಿಗೂ ಉತ್ತಮ ಶಿಕ್ಷಣ ಕೊಡಿಸಿದಳು. ಮುಂದೆ ಆತ ಬಸಪ್ಪ ನಾಯಕನೆಂದು ಖ್ಯಾತಿ ಪಡೆದನು. ಆಡಳಿತದ ದಿಟ್ಟ ನಿರ್ಧಾರಗಳಿಂದ ಗಮನ ಸೆಳೆದಿದ್ದ ವೀರ ವನಿತೆ ಕೆಳದಿ ಚೆನ್ನಮ್ಮಳಿಗೆ ಪಟ್ಟಾಭಿಷೇಕವಾಗಿ ಇಂದಿಗೆ 351 ವರ್ಷಗಳಾದವು.ಇಂತಹ ದಿಟ್ಟ ವನಿತೆಯನ್ನು ಇಂದಿನ ಮಕ್ಕಳು ಅರಿಯಬೇಕಾದದ್ದು ಅವಶ್ಯಕ.
- ದೀಪಿಕಾ ಚಾಟೆ
ಬೆಳಗಾವಿ
- * * * -