ಬಳ್ಳಾರಿ

ತೊಗಲುಗೊಂಬೆ ಪ್ರದರ್ಶನ ಬಹಳ ಕಷ್ಟದ ಕೆಲಸ : ಆರ್‌.ಪಿ.ಐ ಅಮೋಘ

ತೊಗಲುಗೊಂಬೆ ಪ್ರದರ್ಶನ ಬಹಳ ಕಷ್ಟದ ಕೆಲಸ : ಆರ್‌.ಪಿ.ಐ ಅಮೋಘ

ಬಳ್ಳಾರಿ 23: ತೊಗಲುಗೊಂಬೆ ಪ್ರದರ್ಶನದ ಆಟ ಬಹಳ ಕಷ್ಟದ ಕೆಲಸ ಈ ಕಲೆಯನ್ನು ಪ್ರಸ್ತುತಪಡಿಸಲು ಬಹಳ ಚಾಕಚಕ್ಯತೆ ಬೇಕು ಇದನ್ನು ಮೈಗೂಡಿಸಿಕೊಂಡರಷ್ಟೆ ಸರಾಗವಾಗಿ ಪ್ರದರ್ಶಿಸಲು ಸಾಧ್ಯ, ನಾನು ಚಿಕ್ಕವನಿರುವಾಗ ತೊಗಲುಗೊಂಬೆ ಆಟ ನೋಡುತ್ತಿದ್ದೆ ಎಲ್ಲಿ ಈ ಆಟ ಇದ್ದರೂ ಹಗಲು ರಾತ್ರಿ ಎನ್ನದೆ ಎಷ್ಟು ದೂರ ಎಂದು ಲೆಕ್ಕ ಹಾಕದೆ ಹೋಗಿ ನೋಡಿ ಬರುತ್ತಿದ್ದೆ, ಆದರೆ ಇಂದು ಅದೇ ತೊಗಲುಗೊಂಬೆ ಆಟವನ್ನು ನಾನೇ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಕಲಾ ಟ್ರಸ್ಟ್‌ನ ಸುಬ್ಬಣ್ಣ ಇವರಿಗೆ ನಾನು ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ ಎಂದು ಡಿ.ಎ.ಆರ್‌ನ ಆರ್‌.ಪಿ.ಐ ಅಮೋಘ ಅವರು ಹೇಳಿದರು.  

ಅವರು ಇಂದು ನಗರದ ಡಿ.ಎ.ಆರ್ ಗ್ರೌಂಡ್‌ನ ಪೊಲೀಸ್ ಕ್ವಟ್ರಾಸ್‌ನಲ್ಲಿ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್‌ ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ತೊಗಲುಗೊಂಬೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಡೋಲ್ ಬಡಿದು ಉದ್ಘಾಟಿಸಿ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಂಗಭೂಮಿ ನಟ ರಮೇಶ್‌ಗೌಡ ಪಾಟೀಲ್ ದುರ್ಯೋಧನ ಮಾತುಗಳನ್ನು ಹೇಳಿ ಪ್ರೇಕ್ಷಕರನ್ನು ರಂಜಿಸಿದರು.  

ಮಾರುತಿ ತೊಗಲುಗೊಮಬೆ ಕಲಾ ಟ್ರಸ್ಟ್‌ನ ಸುಬ್ಬಣ್ಣ ಟ್ರಸ್ಟ್‌ನ ಕುರಿತು ಪ್ರಸ್ತಾವಿಕ ಮಾತುಗಳನ್ನಾಡಿದರು.  

ವೇದಿಕೆಯಲ್ಲಿ ನಮ್ಮ ಕರವೇ ಯುವ ಸೈನ್ಯ, ರಾಜ್ಯಾಧ್ಯಕ್ಷ ಹನುಮೇಶ್ ಉಪ್ಪಾರ್, ಸುವರ್ಣ ಕರ್ನಾಟಕದ ನಾರಾಯಣಸ್ವಾಮಿ, ವೈದಿಕ ಮಾರ್ಟ್‌ನ ಪ್ರಭುಸ್ವಾಮಿ ಇದ್ದರು.  

ಹುಲಿಗೆಮ್ಮ ಕಲಾ ತಂಡದಿಂದ ತೊಗಲುಗೊಂಬೆ ಪ್ರದರ್ಶನ, ಹೇಮಲತಾ ಮತ್ತು ತಂಡದಿಂದ ಶಾಸ್ತ್ರೀಯ ಸಮೂಹ ನೃತ್ಯ, ಎಚ್ ಹನುಮಂತ ತಿಮ್ಮಲಾಪುರ ತಂಡದಿಂದ ವಚನ ಸಂಗೀತವನ್ನು  ಪ್ರಸ್ತುತ ಪಡಿಸಿದರು.  

ಅಕ್ಷಯ ಎಸ್ ಪ್ರಾರ್ಥಿಸಿದರು, ಟ್ರಸ್ಟ್‌ನ ಕಾರ್ಯದರ್ಶಿ ಸಿ ಜಯಲಕ್ಷ್ಮಿ ನಿರೂಪಿಸಿದರು, ಸಿ ತುಳಸಿ ವಂದಿಸಿದರು. 


ಸುದ್ದಿ ಓದಿ