ವಿದ್ಯುತ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆ
ಬಳ್ಳಾರಿ 07: ನಗರದ ಜೆಸ್ಕಾಂ ಉಪವಿಭಾಗ-2 ಕಾರ್ಯ ವ್ಯಾಪ್ತಿಯಲ್ಲಿ ಬರುವ ಕೆಲ ಸಾರ್ವಜನಿಕರು ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಅಂತಹವರ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣಗಳ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ನಗರ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಹೆಚ್ಚಿನ ಆರ್ಥಿಕ ಮತ್ತು ತಾಂತ್ರಿಕ ನಷ್ಟವನ್ನು ಅನುಭವಿಸುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ವಿದ್ಯುತ್ ಕಳ್ಳತನ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ದಾಖಲಿಸುವ ಕಾರ್ಯ ಇನ್ನು ತೀವ್ರಸ್ವರೂಪ ಪಡೆಯಲಿದ್ದು ವಿದ್ಯುತ್ ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಿದ್ಯುತ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರಿಗೆ ವಿದ್ಯುತ್ ಕಳ್ಳತನ ಆರ್ಥಿಕ ನಷ್ಟದ ಒಟ್ಟು ಮೊತ್ತದ ಮೂರರಿಂದ ಆರು ಪಟ್ಟು ಹೊರೆಯನ್ನು ದಂಡವಾಗಿ ವಿಧಿಸಲಾಗುತ್ತಿದ್ದು, ದಂಡದ ಜೊತೆಗೆ 6 ತಿಂಗಳಿನಿಂದ 5 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುವುದು ಮತ್ತು ಕಳ್ಳತನದಲ್ಲಿ ಭಾಗಿಯಾದ ವ್ಯಕ್ತಿಯು 3 ತಿಂಗಳಿಂದ ಕಡಿಮೆ ಇಲ್ಲದೆ ಮತ್ತು 2 ವರ್ಷದವರೆಗೆ ವಿದ್ಯುತ್ ಸೇವೆ ಪಡೆಯಲು ಅವಕಾಶವಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಹೊಂದಿರುವ ಸಾರ್ವಜನಿಕರು ಹತ್ತಿರದ ಗುವಿಸಕಂನಿ ಕಚೇರಿಗೆ ಸಂಪರ್ಕಿಸಿ ಅಧಿಕೃತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅವರು ಸೂಚಿಸಿದ್ದಾರೆ.