ಡಿ. 21 ರಂದು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ; 5 ವರ್ಷದೊಳಗಿನ 2.07 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ; ಅಭಿಯಾನ ಸಿದ್ಧತೆ ಪೂರ್ಣ: - ಜಿಲ್ಲಾಧಿಕಾರಿ ದಿವ್ಯ ಪ್ರಭು
ಲೋಕದರ್ಶನ ವರದಿ
ಡಿ. 21 ರಂದು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ; 5 ವರ್ಷದೊಳಗಿನ 2.07 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ; ಅಭಿಯಾನ ಸಿದ್ಧತೆ ಪೂರ್ಣ: - ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 11: ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದಡಿ ಬರುವ ಡಿಸೆಂಬರ್ 21 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 5 ವರ್ಷದೊಳಿಗಿನ ಜಿಲ್ಲೆಯ ಸುಮಾರು 2,07,837 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಆಶಾ ಕಾರ್ಯಕರ್ತೆಯರು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ನಿನ್ನೆ (ಡಿ.10) ದಿನ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾ ಭವನದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಯಶಸ್ವಿ ಕಾರ್ಯಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಡಿಸೆಂಬರ್ 21, 2025 ರಿಂದ 24, 2025 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಪೋಲಿಯೋ ಲಸಿಕೆ ಹಾಕಲು 2,07,837 ಮಕ್ಕಳನ್ನು ಗುರುತಿಸಲಾಗಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 891 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು 92 ಟ್ರಾಂಜಿಟ್ ತಂಡಗಳು, 57 ಸಂಚಾರಿ (ಮೊಬೈಲ್) ತಂಡಗಳನ್ನು ರಚಿಸಲಾಗಿದೆ. ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಒಟ್ಟು 3,829 ವ್ಯಾಕ್ಸಿನೆಟರ್ಸ್, 214 ಮೇಲ್ವಿಚಾರಕರು ಇದ್ದು ಜಿಲ್ಲೆಯ ಒಟ್ಟು 4,28,540 ಮನೆಗಳನ್ನು ಲಸಿಕಾ ಅಭಿಯಾನದಡಿ ಸಂದರ್ಶಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಡಿಸೆಂಬರ್ 21 ರಂದು ಗೊತ್ತು ಪಡಿಸಿರುವ ಲಸಿಕಾ (ಬೂತ್) ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ನೀಡಲಾಗುವುದು. ಮತ್ತು ಡಿಸೆಂಬರ್ 22 ರಿಂದ 23 ರವರೆಗೆ 2 ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಡಿಸೆಂಬರ್ 22 ರಿಂದ 24 ರವರೆಗೆ 3 ದಿನಗಳ ಕಾಲ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ಮೂಲಕ ಆರೋಗ್ಯ ಕಾರ್ಯಕರ್ತರು 5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ನೀಡಲಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಎಲ್ಲಾ ಶಾಲೆಗಳು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಬಗ್ಗೆ ಪೋಲಿಯೋ ದಿನದ ಮುನ್ನಾ ದಿನವಾದ ಡಿಸೆಂಬರ್ 20, 2025 ರಂದು ಜಾಥಾ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಡಿಸೆಂಬರ್ 21, 2025 ರ ಬಾನುವಾರದಂದು ಬೆಳಿಗ್ಗೆ 8 ಗಂಟೆಗೆ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲು ಶಾಲಾ ಕೊಠಡಿಗಳನ್ನು ತೆರೆದಿಡಲಾಗುವುದು. ಹಾಗೂ ಪೋಲಿಯೋ ಲಸಿಕೆ ನೀಡಿಕೆಗಾಗಿ ಸಜ್ಜುಗೊಳಿಸುವುದು ಮಾಡಬೇಕೆಂದು ಹೇಳಿದರು.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸ್ಥಳೀಯ ಮಾಧ್ಯಮಗಳ ಮೂಲಕ ಲಸಿಕಾ ದಿನ ಹಾಗೂ ಸ್ಥಳವನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಬೇಕು. ಲಸಿಕಾ ದಿನ ಅಂಗನವಾಡಿ ಕೇಂದ್ರವನ್ನು ತೆರೆದಿಡಬೇಕು ಮತ್ತು ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅವರು ಹೇಳಿದರು.
ಲಸಿಕಾ ದಿನಾಂಕದ ಕುರಿತು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಮಹತ್ವದ ಕುರಿತು ತಾಯಂದಿರ ಸಭೆಗಳಲ್ಲಿ, ಬಾಲ ವಿಕಾಸ ಸಮಿತಿ ಸಭೆಯಲ್ಲಿ, ಸ್ತ್ರೀ ಶಕ್ತಿ ಗುಂಪುಗಳಲ್ಲಿ ಮಾಹಿತಿ ನೀಡಬೇಕು. ಎಲ್ಲಾ ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ಎರಡು ಮೂರು ದಿನಗಳ ಮುಂಚಿತವಾಗಿ ಪ್ರಚಾರ ಮಾಡುವುದು. ಬ್ಯಾನರ್ಗಳನ್ನು ಬರೆಸಿ ಹಾಗೂ ಬಿತ್ತಿ ಪತ್ರಗಳನ್ನು ಮುದ್ರಿಸಿ ಪ್ರದರ್ಶಿಸಬೇಕು ಮತ್ತು ನಗರ ಪ್ರದೇಶದಲ್ಲಿರುವ ಎಲ್ಲಾ ಖಾಸಗಿ ಹಾಗೂ ಕಾರ್ೊರೇಟ್ ಆಸ್ಪತ್ರೆಗಳು, ಕ್ಲಿನಿಕ್ಗಳು ಮತ್ತು ವೈದ್ಯಕೀಯ ಸಂಸ್ಥೆಗಳೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಲಸಿಕಾ ಬೂತ್ಗಳನ್ನು ತೆರೆದು ಪೋಲಿಯೋ ಲಸಿಕೆ ನೀಡುವಂತೆ ಕ್ರಮವಹಿಸುವುದು ಮತ್ತು ಒಪಿಡಿ ಅಥವಾ ಐಪಿಡಿಯಲ್ಲಿನ 5 ವರ್ಷದ ಮಕ್ಕಳು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಹನಿ ಪಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಪ್ಯಾಕ್ಗಳನ್ನು ತಯಾರಿಸಲು ನಿರಂತರ ವಿದ್ಯುಚ್ಚಕ್ತಿಯ ಅವಶ್ಯಕತೆ ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ದಿನಾಂಕದ ಹಿಂದಿನ ಒಂದು ವಾರದಿಂದ ಮುಂದಿನ ಮೂರು ದಿನಗಳವರೆಗೆ ವಿದ್ಯುಚ್ಚಕ್ತಿ ನಿರಂತರವಾಗಿ ಸರಬರಾಜು ಮಾಡುವಂತೆ ಕ್ರಮವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಅವರು ಹೇಳಿದರು.
ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸವಿರುವ ವಲಸೆ ಮಕ್ಕಳಿಗೆ ಲಸಿಕೆ ದೊರಕುವಂತೆ ನೋಡಿಕೊಳ್ಳುವುದು. ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯಕ್ರಮದ ಬಗ್ಗೆ ಆಗಾಗ್ಗೆ ಪ್ರಕಟಣೆ ಹೊರಡಿಸುವುದು. ಪೋಲಿಯೋ ಲಸಿಕೆಯನ್ನು ಹಾಕಲು ರೈಲ್ವೆ ಶಾಲೆಗಳಲ್ಲಿ ಸತ್ರ ನಡೆಸಲು ಸಹಕರಿಸುವುದು. ಪೋಲಿಯೋ ಲಸಿಕೆಯನ್ನು ಹಾಕಲು ಬೂತ್ಗಳನ್ನು ಆಯೋಜಿಸಲು ಸಹಕರಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಸುಜಾತ.ವಿ.ಹಸವೀಮಠ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಹೆಸ್ಕಾಂ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.