ಲೇಖನಗಳು

ʻಪುದ್ದು ಕೊಡ್ತರ್ʼ ಅನಾವರಣ

ʻಪುದ್ದು ಕೊಡ್ತರ್ʼ  ಅನಾವರಣ

ಅಂಕಣ: ನಾದಾಂಕಣ

ಸಾಮಾನ್ಯವಾಗಿ ಕೃತಿಯೊಂದು ಬಿಡುಗಡೆ ಕಾಣಬೇಕಿದ್ದರೆ ಅದನ್ನೊಂದು ಬಣ್ಣದ ಕಾಗದದಲ್ಲಿ ಸುತ್ತಿ ಟ್ಯಾಪ್ ಅಂಟಿಸಿ ಮೇಜಿನ ಮೇಲಿಡುತ್ತಾರೆ. ಅತಿಥಿಗಳು ಅದನ್ನು ಎಳೆದಾಡಿ ಬಿಡಿಸಿ ಅದರೊಳಗಿನ ಪುಸ್ತಕಗಳನ್ನು ವೇದಿಕೆಯಲ್ಲಿರುವ ಇತರ ಅತಿಥಿಗಳಿಗೂ ಹಂಚುತ್ತಾರೆ. ಎಲ್ಲರೂ ಬಂದಿತ ಕೈದಿಗಳಂತೆ ಸಾಲಾಗಿ ನಿಂತು ಬಿಡುಗಡೆಗೊಳಿಸುತ್ತಾರೆ. ಮೊದಲೆಲ್ಲ ದೀಪ ಬೆಳಗುವುದಾದರೂ ಒಬ್ಬರೆ. ಕೃತಿ ಬಿಡುಗಡೆ ಮಾಡುವುದಾದರೂ ಒಬ್ಬರೆ. ಇಂದೀಗ ಸರ್ವರಿಗೆ ಸಮಪಾಲು.

ಕರಾವಳಿಯ ಇತಿಹಾಸದಲ್ಲಿ ಕೊರಗ ಜನಾಂಗಕ್ಕೆ ಮಹತ್ತರವಾದ ಸ್ಥಾನವಿದೆ. ಇನ್ನೂ ಅದನ್ನು ಗಣಿಸದ ಮಂದಿ ನಾವು. ಅವರು ನಮ್ಮ ಆದಿಮರು. ಸಮಾಜ ಅವರನ್ನು ಯಾವ ರೀತಿಯಲ್ಲಿ ಕಾಣುತ್ತದೆ, ಕಂಡಿದೆ ಎಂಬ ಚಿಂತನೆಯನ್ನು ಶಶಿರಾಜ್ರಾವ್ಕಾವೂರು ಎಂಬ ಯುವ ಬರಹಗಾರ ತುಳು ಕಾದಂಬರಿ ರೂಪದಲ್ಲಿ ಪ್ರಕಟಿಸಿದ್ದಾರೆ. ʻಪುದ್ದು ಕೊಡ್ತರ್ʼ ಎಂಬುದು ಕಾದಂಬರಿ. ಅದರ ಬಿಡುಗಡೆಯನ್ನು ವಿನೂತನ ರೀತಿಯಲ್ಲಿ ಮಾಡಬೇಕೆಂಬುದು ಕಾದಂಬರಿಕಾರ ಕಾವೂರರ ನಿಲುಮೆಯಾಗಿತ್ತು. ಅದಕ್ಕೆ ಹೊಂದಿಕೊಳ್ಳುವ ಹಾಗೆ ಹತ್ತು ಮಂದಿ ಕೊರಗ, ಕೊರಗದಿಯರು ವೇಷಭೂಷಣ ಧರಿಸಿ ಕೈಲ್ಲಿ ಡೋಲು, ಕೊಳಲು, ಚಕ್ರತಾಳಗಳನ್ನು ಹಿಡಿದುಕೊಂಡು ವೇದಿಕೆಯೇರಿದರು. ಅವರಿಗೊಬ್ಬ ದೋಲು ನುಡಿಸುವ ಪುದ್ದುಕುಡ್ತರ್ನಂತಹ ಗುರಿಕಾರರು!

 ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಒಬ್ಬೊಬ್ಬರಾಗಿ ವೇದಿಕೆಗೆ ಬರುವಾಗ ಅವರಿಗೋಸ್ಕರ ವೈವಿಧ್ಯಮಯ ʻಟಕ್ಕ್ʼಗಳನ್ನು ನುಡಿಸಿ ಅತಿಥಿಗಳಿಗೆ ಎಲೆ, ಅಡಿಕೆಯ ವೀಳ್ಯಕೊಟ್ಟು ಕರೆಸಿಕೊಂಡರು. ಎಲ್ಲರೂ ವೇದಿಕೆಯಲ್ಲಿ ಆಸೀನರಾದಾಗ ಇನ್ನಷ್ಟು ವೈವಿಧ್ಯಮಯ ರೀತಿಯ ಟಕ್ಕ್ಗಳನ್ನು ನುಡಿಸಿದರು. ಡೋಲಿನಲ್ಲಿ ಹದಿನಾರು ಬಗೆಯ ಟಕ್ಕ್ಗಳನ್ನು ನುಡಿಸಬಲ್ಲವರಾದ ಕೊರಗರು ಅವುಗಳ ಪ್ರಾತ್ಯಕ್ಷಿಕೆಯನ್ನು ಅದೇವೇಳೆ ಮಾಡಿ ಕಾರ್ಯಕ್ರಮವನ್ನು ಅರ್ಥಗರ್ಭಿತಗೊಳಿಸಿದರು. ಕೊರಗ ಕಲಾವಿದರ  ಪ್ರತಿನಿಧಿಯಾಗಿಯೂ ಅತಿಥಿಯಾಗಿಯೂ ರಮೇಶ್ಮಂಚಕಲ್ ವೇದಿಕೆಯಲ್ಲಿ ಆಸೀನರಾದರು.

ಈ ರೀತಿಯ ಸಂಭ್ರಮಕ್ಕೂ ಕಾದಂಬರಿಯ ಬಿಡುಗಡೆಗೂ ಸಂಬಂಧವೇನು? ಎಂದು ಯಾರಾದರೂ ಪ್ರಶ್ನಿಸಬಹುದು. ʻಇದೀಗ ಪ್ರೊ. ಬಿ. ಎ. ವಿವೇಕ ರೈ ಅವರಿಂದ ಕಾದಂಬರಿಯ ಅನಾವರಣʼ ಎಂಬ ಪ್ರಕಟಣೆ ಬಂದ ಕೂಡಲೆ ವೇದಿಕೆಯಲ್ಲಿ ಮತ್ತೊಮ್ಮೆ ಕೊರಗರ ನುಡಿತ ಪ್ರಾರಂಭವಾಯಿತು. ಕುಣಿತ, ನುಡಿತಗಳೊಂದಿಗೆ ವೇದಿಕೆಗೆ ಬಂದ ಅವರಲ್ಲಿ ಒಬ್ಬಾಕೆ ಕೊರಗದಿಯ ಹೆಗಲಲ್ಲಿ ಜೋಳಿಗೆಯೊಂದು ನೇತಾಡುತ್ತಿತ್ತು. ಅತಿಥಿಗಳ ಹತ್ತಿರ ಬಂದವಳೇ ಆಕೆ ಜೋಳಿಗೆಯಿಂದ  ಪುಸ್ತಕ ತೆಗೆದು ಪ್ರೊ.ರೈಯವರ ಕೈಯಲ್ಲಿಟ್ಟರು. ಅವರವನ್ನು ವೇದಿಕೆಯಲ್ಲಿದ್ದವರಿಗೆ ಹಂಚಿದಾಗ ಪುಸ್ತಕ ಅನಾವರಣವಾಯಿತು!

ಹೀಗೊಂದು ವಿಶಿಷ್ಟ ರೀತಿಯಲ್ಲಿ ʻಪುದ್ದು ಕೊಡ್ತರ್ʼ ಅನಾವರಣಗೊಳ್ಳುವುದಕ್ಕೂ ಒಂದು ಕಾರಣವಿದೆ. ಅದು ಅದೇ ಕೊರಗ ಸಮುದಾಯದ ಕುರಿತ ಕಾದಂಬರಿ. ಕಾದಂಬರಿಯ ನಾಯಕ ʻಪುದ್ದುʼ ಎಂಬಾತ  ಕೊರಗ ಸಮುದಾಯದ ಗುರಿಕಾರ. ಕೊರಗ ಸಮುದಾಯವನ್ನು ಮುನ್ನಡೆಸುವ ಜವಾಬ್ದಾರಿಯಿದ್ದವ. ಊರಿನ ಯಾವುದೇ ಸಭೆ, ಸಮಾರಂಭಗಳಿಗೆ ಪುದ್ದು ಹಾಗೂ ಆತನ ತಂಡ ಡೋಲಿನೊಂದಿಗೆ ಹಾಜರಾಗಲೇ ಬೇಕು. ಸ್ಮಶಾನಕ್ಕೆ ಹೆಣ ಒಯ್ಯುವಾಗಲೂ ಅವರು ಬೇಕು. ಭೂತದ ಕೋಲಕ್ಕೂ ಅವರು ಬೇಕು. ಆದರೆ ನೇಮ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಪ್ರಾಂಗಣದೊಳಕ್ಕೆ ಅವರಿಗೆ ಪ್ರವೇಶವಿಲ್ಲ. ಹೊರಗಡೆ ನಿಂತುಕೊಂಡೇ ಡೋಲು ನುಡಿಸಬೇಕು.

ಕಾದಂಬರಿಯಲ್ಲಿ ಕೊರಗರ ಬದುಕಿನ ಹಲವು ಆಯಾಮಗಳ ಸೂಕ್ಷ್ಮ ಒಳನೋಟಗಳಿವೆ.  ಕೊರಗರ ಆಚಾರ-ವಿಚಾರಗಳು, ಇತರ ಸಮುದಾಯದವರಿಗಾಗಿ ಅವರು ಕೈಗೊಳ್ಳುವ ಸೇವೆಗಳು- ಇತ್ಯಾದಿ ಹಲವು ಅಂಶಗಳನ್ನು ಕ್ಷೇತ್ರಕಾರ್ಯದೊಂದಿಗೆ ಶಶಿರಾಜ್ರಾವ್ ಕಂಡುಕೊಂಡು  ಕಾದಂಬರಿಯಲ್ಲಿ ಅಳವಡಿಸಿದ್ದಾರೆ.

ಅಸ್ಪೃಶ್ಯತೆ ಇವತ್ತಿಗೂ ತಾಂಡವವಾಡುತ್ತಿರುವ ಸಮಾಜದಲ್ಲಿ ಕೋಲದ ಕಾಲ. ಪುದ್ದು ತನ್ನಕಣ್ಣೆದುರಿಗೆ ಕೋಲ ಕಟ್ಟಿದಾತ ಬಿದ್ದು ಗಂಭೀರವಾಗಿ ಗಾಯ ಮಾಡಿಕೊಂದ್ದನ್ನು ಕಾಣುತ್ತಾನೆ. ಎಲ್ಲರೂ ಕೈಚೆಲ್ಲಿದಾಗ ಪುದ್ದು ಕೊಡ್ತರ್ತನ್ನಲ್ಲಿದ್ದ ನಾಟಿ ಔಷಧಿಯಿಂದ ಗುಣ ಮಾಡಲೆಂದು ದೈವಸ್ಥಾನದ ಗೋಡೆಯನ್ನು ಅನಿವಾರ್ಯವಾಗಿ ದಾಟುತ್ತಾನೆ. ಔಷಧೋಪಚಾರದಿಂದ ರಕ್ತ ಸುರಿಯದಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆ ಪುದ್ದು ಒಂದು ಜೀವ ಉಳಿಸುತ್ತಾನೆ. ಆದರೆ ಇವ್ಯಾವುವೂ ಅಸ್ಪೃಶ್ಯತೆಯಿಂದ ಆತನಿಗೆ ಮಾಫಿ ಕೊಡಿಸುವಲ್ಲಿ ಸಹಕಾರಿಯಾಗುವುದಿಲ್ಲ. ಪಂಚಾಯತಿ ಸೇರಿ ಪುದ್ದುವಿಗೆ ಒಂದು ವರ್ಷದ ಗಡೀಪಾರು ಶಿಕ್ಷೆ ವಿಧಿಸುತ್ತಾರೆ.

ಕಾದಂಬರಿಯ ನಾಡಿರೂಪದ ಮಾತನ್ನು ಪುದ್ದು ತನ್ನ ಆತ್ಮೀಯನಾದ ಪಿಜಿನನಿಗೆ ಹೇಳುತ್ತಾನೆ: ʻಪಿಜಿನಾ, ನಮ್ಮ ಡೋಲಿಗೆ ಎರಡೂ ಕಡೆಯಿಂದ ಏಟು, ನಮಗೆ ನಾಲ್ಕೂ ಕಡೆಯಿಂದ ಬೀಳ್ತದಲ್ವಾ!ʼ ಈ ಒಂದು ಮಾತು ಸಾಕು ಕೊರಗರ ಬದುಕಿನ ಅಸಹಾಯಕತೆಯನ್ನು ವಿವರಿಸಲು.

 ಕೊರಗರು ಮೂಲತಃ  ವಿನಯಶೀಲರು, ಎಲ್ಲರಿಗೂ ತಲೆಬಾಗುವವರು. ಎಲ್ಲರ ಕಷ್ಟಗಳನ್ನು ತಮ್ಮ ತಲೆಯಲ್ಲಿ ಹೊತ್ತು ಅದು ತಮ್ಮದೇ ಕಷ್ಟವೆಂದು ತಿಳಿದು ನಡೆದಾಡುವವರು.ಒಂದಾನೊಂದು ಕಾಲದ ಅಜಲು ಪದ್ಧತಿಗೆ ಬಲಿಯಾಗಿ ತಮ್ಮತನವನ್ನು ಕಳೆದುಕೊಂಡವರು.

ಪ್ರೊ. ವಿವೇಕರೈಯವರು  ಪುಸ್ತಕ ಅನಾವರಣಗೊಳಿಸಿ ಮಾತನಾಡುತ್ತಾ ಕೊರಗರ ಮೇಲ್ಮೆಗಾಗಿ -ತಮ್ಮ ಜಾತಿಯನ್ನೂ ವಕೀಲಿ ವೃತ್ತಿಯನ್ನೂ ತೊರೆದು-ಹೋರಾಟವನ್ನೇ ನಡೆಸಿದ ಕುದ್ಮಲ್ರಂಗರಾಯರನ್ನು ಬಹುವಾಗಿ ನೆನೆದರು.

ಇಂದೀಗ ಕೊರಗರಲ್ಲಿ ವಿದ್ಯಾಭ್ಯಾಸ ಪಡೆದವರಿದ್ದಾರೆ. ಅವರಿಗೆ ಸರಿಗಟ್ಟಾದ ಉದ್ಯೋಗವಿಲ್ಲ. ಅವರೊಳಗಿನ ಕೀಳರಿಮೆ ಇನ್ನೂ ಅವರನ್ನು ಆಳುತ್ತಿದೆ. ಅವೆಲ್ಲವನ್ನೂ ಹೋಗಲಾಡಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿ ನಮ್ಮದಿದೆ. ಎಂಬುದನ್ನೂ ಡಾ. ರೈಯವರು ನೆನಪಿಸಿಕೊಟ್ಟರು.

ಕಾದಂಬರಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಕೊರಗರನ್ನು ತೊಡಗಿಸಿಕೊಂಡದ್ದು ವಿನೂತನ ವಿಷಯ ಎನಿಸಿದರೂ ಅದಷ್ಟೇ ಅಲ್ಲ; ಪತ್ರಿಕೆಗಳು, ಇತರ ಪ್ರಸಾರ ಮಾಧ್ಯಮಗಳು ಕೊರಗರನ್ನು ವೇದಿಕೆಗೆ ತಂದ ಶಶಿರಾಜ ರಾವ್ಕಾವೂರರನ್ನು ಕೊಂಡಾಡಿದರು. ಅದಷ್ಟೇ ಅಲ್ಲ; ಅವರನ್ನು ಮುಖ್ಯವಾಹಿನಿಗೆ ತರುವ ಕುರಿತು ಪ್ರೊ. ರೈಯವರು ಗಟ್ಟಿದನಿಯಲ್ಲಿ ಆಡಿದ ಮಾತುಗಳು ಕೊರಗರ ನಾಳೆಗಳ ಕುರಿತು ಪುಟ್ಟದೊಂದು ಆಶಾಭಾವನೆ ಮೂಡಿಸಿತು. ಆ ದೃಷ್ಟಿಯಲ್ಲಿ ಇದೊಂದು ಸಮಾಜದ ಕಣ್ಣುತೆರೆಸುವ ಕಾರ್ಯಕ್ರಮವೂ ಆಯಿತು.

ʻಪುದ್ದುಕೊಡ್ತರ್ʼ ಕಾದಂಬರಿಯನ್ನು ಓದಲೆಂದು ಕಾತರಿಸುವವರಲ್ಲಿ ಹೆಚ್ಚಿನವರು ತುಳು ಭಾಷೆಯಲ್ಲಿರುವ ಈ ಕೃತಿಯನ್ನು ಓದಲಾರಿರಿ. ಅದಕ್ಕೆಂದೇ ಮಣಿಪಾಲ್ಪ್ರೆಸ್ನವರು ಅದನ್ನು ಇದೀಗ ಕನ್ನಡದಲ್ಲಿ ತರುವ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದಾರೆ. ಅದನ್ನು ಶಶಿರಾಜ್ಕಾವೂರ್ಅವರೇ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂಬುದು ಕರಾವಳಿಯ ಬರಹಗಾರರ ಶಕ್ತಿ.

ಸುದ್ದಿ ಓದಿ