ಪ.ಪಂ.ಗೆ ಸಿಡಿ ನಿರ್ಮಾಣ ಮಾಡುವಂತೆ ಸಾರ್ವಜನಿಕರ ಆಗ್ರಹ
ಮುಂಡಗೋಡ:ಪಟ್ಟಣದ ಹುಬ್ಬಳ್ಳಿ ರಸ್ತೆಯ ಅನ್ನಪೂರ್ಣೇಶ್ವರಿ ನಗರದಿಂದ ಕೊನೆಗೊಳ್ಳುವ ಅಮ್ಮಾಜಿ ಕೆರೆ ರಸ್ತೆಯ ಸಂಪರ್ಕ ರಸ್ತೆ ಮಧ್ಯೆ ಪಟ್ಟಣ ಪಂಚಾಯಿತಿಯವರು ಸಿಡಿ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಾರ್ಡ್ ನಂ.3ರ ಅನ್ನಪೂರ್ಣೇಶ್ವರಿ ನಗರದಿಂದ ಹುಬ್ಬಳ್ಳಿ ರಸ್ತೆ-ನೂರಾನಿಗಲ್ಲಿ ರಸ್ತೆಗೆ ಸಂಪರ್ಕ ರಸ್ತೆ ಇದ್ದು ನಡುವೆ ಚರಂಡಿ ಬಂದಿರುವ ಕಾರಣದಿಂದ ಸಂಪರ್ಕ ಕಡಿತಗೊಂಡಿದೆ. ರಸ್ತೆ ಇಕ್ಕೆಲಗಳಲ್ಲಿ ಇರುವ ಚರಂಡಿಗಳಲ್ಲಿ ಹುಬ್ಬಳ್ಳಿ ರಸ್ತೆ, ಪಟ್ಟಣದ ಹಲವು ಕಡೆಗಳಿಂದ ಮತ್ತು ಅನ್ನಪೂರ್ಣೇಶ್ವರಿ ನಗರದ ಚರಂಡಿಯಿಂದ ನೀರು ಹರಿದು ಬಂದು ಸಾರ್ವಜನಿಕರಿಗೆ ಓಡಾಡಲು ತೊಂದರೆ ಉಂಟಾಗುತ್ತಿದೆ. ಮಳೆಗಾಲದ ಸಮಯವಾಗಿದ್ದರಿಂದ ಬಡಾವಣೆ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಅನ್ನಪೂರ್ಣೇಶ್ವರಿ ನಗರದಿಂದ ಹುಬ್ಬಳ್ಳಿ ರಸ್ತೆ-ನೂರಾನಿಗಲ್ಲಿ ರಸ್ತೆ ಸಂಪರ್ಕ ಮಾಡುವ ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಸಿಡಿ ನಿರ್ಮಿಸಿ ಸಾರ್ವಜನಿಕರಿಗೆ ಓಡಾಡಲು ಮತ್ತು ಚರಂಡಿಗಳ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಜುನಾಥ ಕಲಾಲ, ಮುಂಡಗೋಡ ನಿವಾಸಿ:ಅನ್ನಪೂರ್ಣೇಶ್ವರಿ ನಗರದಿಂದ ಕೊನೆಗೊಳ್ಳುವ ಹುಬ್ಬಳ್ಳಿ ರಸ್ತೆ-ನೂರಾನಿಗಲ್ಲಿ ರಸ್ತೆ ಸಂಪರ್ಕ ಮಧ್ಯೆ ಪ.ಪಂ.ನವರು ಸಿಡಿ ನಿರ್ಮಾಣ ಮಾಡಿದರೆ ರಸ್ತೆ ಸಂಪರ್ಕದಿಂದ ಬಡಾವಣೆ ಜನರಿಗೆ ಓಡಾಡಲು ಅನುಕೂಲವಾಗುವುದು. ಚರಂಡಿಗಳ ನೀರು ಸರಾಗವಾಗಿ ಹರಿದು ಹೋಗುವುದು.
ಶಂಕರ ದಂಡಿನ, ಕಿರಿಯ ಇಂಜಿನಿಯರ ಪಟ್ಟಣ ಪಂಚಾಯಿತಿ ಮುಂಡಗೋಡ: ನಗರೋತ್ಥಾನ ಹಂತ 4ರ ಯೋಜನೆಯಡಿಯಲ್ಲಿ ಟೆಂಡರ್ ಕರೆಯಲಾಗಿದೆ. ಇನ್ನೊಂದು ತಿಂಗಳಲ್ಲಿ ಹುಬ್ಬಳ್ಳಿ ರಸ್ತೆಯಿಂದ ಅಮ್ಮಾಜಿ ಕೆರೆವರೆಗೆ ರಸ್ತೆಯ ಎರಡೂ ಬದಿಗೆ ಸಿಸಿ ಚರಂಡಿ ನಿರ್ಮಾಣದ ಜೊತೆಗೆ ಸಿಡಿ ಕೂಡ ನಿರ್ಮಾಣ ಮಾಡಲಾಗುವುದು.