ವಾಂತಿ ಭೇದಿ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಮುಖ್ಯ: ಡಿಎಚ್ಒ ಡಾ. ಜನಾರ್ಧನ
ಬಳ್ಳಾರಿ 18: ಕಂಪ್ಲಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಇತ್ತೀಚಿಗೆ ಕಂಡುಬಂದ ವಾಂತಿ ಭೇದಿ ಪ್ರಕರಣಗಳು ಕ್ರಮೇಣ ನಿಯಂತ್ರಣಕ್ಕೆ ಬಂದಿದ್ದು, ಸಾರ್ವಜನಿಕರು ಮುಂದಿನ ಹಲವು ದಿನಗಳವರೆಗೆ ಕುಡಿಯುವ ನೀರನ್ನು ಕುದಿಸಿ, ಆರಿಸಿ, ಸೋಸಿ ಕುಡಿಯಬೇಕು ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಮುಖ್ಯ ಎಂದು ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಹೆಚ್.ಎಲ್ ಜನಾರ್ಧನ್ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ಗೋನಾಳ್ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಮೂಲಗಳ ಪರೀಶೀಲನೆ, ಬೋರ್ವೆಲ್ ನೀರುಗಳ ಕ್ಲೋರಿನೇಷನ್ ಹಾಗೂ ಸರಬರಾಜು ಮಾಡುವ ಪೈಪ್ಲೈನ್ಗಳ ಪರೀಶೀಲನೆ ಕೈಗೊಂಡು ವಾಂತಿ ಭೇದಿಯಿಂದ ಗುಣಮುಖರಾದ ಮನೆಗಳಿಗೆ ಗುರುವಾರದಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಳೆದ 21 ದಿನಗಳಲ್ಲಿ ಒಟ್ಟು 45 ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿದ್ದು, 44 ಜನರು ಗುಣಮುಖರಾಗಿದ್ದಾರೆ. ಇವರಲ್ಲಿ ಕಂಪ್ಲಿಯಲ್ಲಿ 4 ಜನ, ಬಳ್ಳಾರಿ ವಿಮ್ಸ್ನಲ್ಲಿ 3 ಜನ, ಜಿಲ್ಲಾ ಆಸ್ಪತ್ರೆಯಲ್ಲಿ 4ಜನ, ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಬ್ಬರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 3 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಗ್ರಾಮದ ಜನರು ಊಟಕ್ಕಿಂತ ಮುಂಚೆ, ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಮಕ್ಕಳಿಗೆ ಎದೆಹಾಲು ನೀಡುವಾಗ, ಆಹಾರ ಕೊಡುವಾಗ ಸ್ವಚ್ಛವಾಗಿ ಕೈಗಳನ್ನು ತೊಳೆಯುವುದು, ಬಿಸಿ ಬಿಸಿ ಆಹಾರ ಸೇವನೆ ಮಾಡುವುದು, ಆಹಾರವನ್ನು ಮುಚ್ಚಿಡುವುದು, ಕುಡಿಯುವ ನೀರಿಗೆ ಹಾಲೋಜೆನ್ ಹಾಕಿ ಎರಡು ಗಂಟೆ ನಂತರ ಕುಡಿಯಲು ಬಳಸುವುದು, ಗೃಹ ಶೌಚಾಲಯ ಬಳಸುವುದು ಮುಂದುವರೆಸಬೇಕು ಎಂದು ಹೇಳಿದರು.
ಸ್ಥಳದಲ್ಲಿಯೇ 2 ಅಂಬುಲೆನ್ಸ್ ಹಾಗೂ ಅಗತ್ಯ ವೈದ್ಯಕೀಯ ಸಿಬ್ಬಂದಿಯೊಂದಿಗೆ 21 ದಿನಗಳ ಕಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಗಿದ್ದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಪ್ರಸ್ತುತ ಯಾರು ಚಿಕಿತ್ಸೆ ಪಡೆಯುತ್ತಿಲ್ಲ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಡಾ.ಜನಾರ್ಧನ ಅವರು ತಿಳಿಸಿದರು.
ಗ್ರಾಮದಲ್ಲಿ 6 ನೀರಿನ ಮೂಲಗಳನ್ನು ಜಿಲ್ಲಾ ಕಾಲಾರಾ ತಂಡವು ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಿಲ್ಲ ಎಂದು ಕಂಡುಬಂದ 3 ನೀರಿನ ಮೂಲಗಳನ್ನು ನಿರಂತರವಾಗಿ ಪಂಚಾಯಿತಿ ಸಹಕಾರದೊಂದಿಗೆ ಶುದ್ದೀಕರಣ ಮಾಡಲಾಗುತ್ತಿದೆ. ಒಟ್ಟು 5 ನೀರಿನ ಮೂಲಗಳು ಕುಡಿಯಲು ಯೋಗ್ಯವೆಂದು ಕಂಡುಬಂದಿದ್ದು ಕುಡಿಯಲು ಯೋಗ್ಯವಿಲ್ಲದ 1 ನಳದ ನೀರಿನ ಮೂಲವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನೊಳಗೊಂಡ 4 ವೈದ್ಯಕೀಯ ತಂಡಗಳನ್ನು ರಚಿಸಿ ಗ್ರಾಮದ ಎಲ್ಲಾ 185 ಮನೆಗಳನ್ನು ಭೇಟಿ ಮಾಡಲು ಕ್ರಮವಹಿಸಿ ಅಂದಾಜು 1125 ಜನತೆಗೆ ಒಟ್ಟು 2850 ಓಆರ್ಎಸ್ ಪೊಟ್ಟಣ, 11000 ಹ್ಯಾಲೋಜನ್ ಮಾತ್ರೆ ಮತ್ತು 150 ಜಿಂಕ್ ಮಾತ್ರೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ನೋಡಲ್ ಅಧಿಕಾರಿ ಡಾ.ಅಬ್ದುಲ್ಲಾ ಪ್ರಭಾರಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಧಿಕ, ವೈದ್ಯಾಧಿಕಾರಿ ಡಾ.ಸಂದೀಪ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಬಿಹೆಚ್ಇಒ ಶೋಭ, ಸಮುದಾಯ ಆರೋಗ್ಯ ಅಧಿಕಾರಿ ಮಮತ, ಸಿಬ್ಬಂದಿಯವರಾದ ಬಸವರಾಜ್, ಕವಿತ, ಮಂಜುಳಾ, ಪೂಜಾ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್, ಚಿದಾನಂದ, ಸೇರಿದಂತೆ ಇತರರು ಹಾಜರಿದ್ದರು.
------------------