ಬಳ್ಳಾರಿ

ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ: ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ

ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ: ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ

ಬಳ್ಳಾರಿ 29: ಸರ್ಕಾರ ನಿಮಗೆ ನೀಡುವ ವೇತನಕ್ಕೆ ಸರಿಯಾಗಿ ಕೆಲಸ ಮಾಡಿ, ಹಣ ಅಥವಾ ಬೇರೆ ಯಾವುದೇ ದುರಾಸೆಗೆ ಬೀಳದೆ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಅವರು ಹೇಳಿದರು. 

ಭ್ರಷ್ಟಾಚಾರ ವಿರುದ್ಧದ ಜಾಗೃತಿ ಅರಿವು ಸಪ್ತಾಹದ ನಿಮಿತ್ತ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಉದ್ದೇಶ ಪೂರ್ವಕವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ.  ಸರ್ಕಾರದ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ವಿನಾಕಾರಣ ತಡ ಮಾಡದೆ, ನಿಗದಿತ ಸಮಯದಲ್ಲಿ ಸೇವೆ ಒದಗಿಸಿ. ನೀವು ತೆಗೆದುಕೊಳ್ಳುವ ಸಂಬಳಕ್ಕೆ ಯೋಗ್ಯವಾದ ಕೆಲಸ ಮಾಡಿ. ಜೀವನದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಿ ಎಂದರು. 

ಭಷ್ಟಾಚಾರ ನಿಗ್ರಹ ದಳದ ಬಳ್ಳಾರಿ ವಲಯದ ಪೊಲೀಸ್ ಅಧೀಕ್ಷಕಾದ ಗುರುನಾಥ ಬ.ಮತ್ತೂರ ಅವರು ಮಾತನಾಡಿ ಇಂದಿನ ಯುವ ಜನತೆ ಪಣ ತೊಟ್ಟರೆ, ಭಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಆತ್ಮಸಾಕ್ಷಿ, ಮನಸ್ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ ಮತ್ತು ಭಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಎಲ್ಲರೂ ಕೈಜೋಡಿಸಿ, ಪಾರದರ್ಶಕವಾಗಿ,  ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು. 

ಭಷ್ಟಾಚಾರ ನಿಗ್ರಹ ದಳದ ಆರಕ್ಷಕ ಉಪ ಅಧೀಕ್ಷಕರಾದ ಎ.ಸೂರ್ಯನಾರಾಯಣ ರಾವ್ ಅವರು ಮಾತನಾಡಿ ಸರ್ಕಾರಿ ನೌಕರರು ಸರ್ಕಾರ ನಿಗದಿಪಡಿಸುವ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ. ಯಾವುದೇ ಅವ್ಯವಹಾರಕ್ಕೆ ಮುಂದಾಗಬೇಡಿ. ಆದಾಯದ ಮೂಲಕ್ಕಿಂತ ಹೆಚ್ಚಿನ ಹಣ ಸಂಪಾದಿಸಿದರೆ ಅಂತವರನ್ನು ವಿಚಾರಕ್ಕೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ನೀರೀಕ್ಷಕರಾದ ಪ್ರಭುಲಿಂಗಯ್ಯ ಹಿರೇಮಠ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ