ಬಳ್ಳಾರಿ

ಹೋಂ ಐಸೋಲೇಶನ್‍ನಲ್ಲಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ; ತೀವ್ರ ನಿಗಾವಹಿಸಿ - ಅಶ್ವತ್‍ನಾರಾಯಣ

ಹೋಂ ಐಸೋಲೇಶನ್‍ನಲ್ಲಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ; ತೀವ್ರ ನಿಗಾವಹಿಸಿ - ಅಶ್ವತ್‍ನಾರಾಯಣ

ಬಳ್ಳಾರಿ,ಏ.28 ಕೋವಿಡ್ ಸೋಂಕಿತ ರಾಗಿ ಹೋಂ ಐಸೋಲೇಶನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಿ, ಗುಣಮುಖರಾಗುವವರೆಗೆ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಬೇಕು  ಎಂದು ಉಪಮುಖ್ಯಮಂತ್ರಿ, 

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್‍ನಾರಾಯಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ/ವಿಜಯನಗರ ಜಿಲ್ಲೆಯ ಕೋವಿಡ್ ಸ್ಥಿತಿಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು,ವಿಶೇಷಾಧಿಕಾರಿಗಳು,ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ  ಮಾತನಾಡಿದ ಅವರು, ಈಗ ನೀಡಲಾಗುತ್ತಿರುವ ಹೋಂ ಐಸೋಲೇಶನ್ ಕಿಟ್‍ನಲ್ಲಿ ಇನ್ನೂ ಕೆಲ ಔಷಧಗಳನ್ನು ಸೇರಿಸಿ ನೀಡುವಂತೆ ಅವರು ಸೂಚಿಸಿದರು.

ಹೋಂ ಐಸೋಲೇಶನ್‍ನಲ್ಲಿರುವವ ಆರೋಗ್ಯದ ಮೇಲೆ ಸದಾ ನಿಗಾವಹಿಸಬೇಕು ಮತ್ತು ಏರಿಳಿತ ಕಂಡುಬಂದಲ್ಲಿ ತಕ್ಷಣ ಶಿಫಾರಸ್ಸು ಮಾಡಿ ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಬೇಕು. ಅಂದಾಗ ಮಾತ್ರ ಪ್ರಾಣಗಳನ್ನು ಕಾಪಾಡಲು ಸಾಧ್ಯ ಎಂದರು.

ಲಾಕ್‍ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ನಗರಗಳಿಂದ ವಲಸೆ ಕಾರ್ಮಿಕರು ಹಳ್ಳಿಗಳತ್ತ ಬರುತ್ತಿದ್ದು,ಅವರಿಂದ ಕೊರೊನಾ ಸೋಂಕು ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.

ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಬೇಕಾದ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ ಉಪಮುಖ್ಯಮಂತ್ರಿ ಗಳು  ಕೋವಿಡ್ ಸೋಂಕು ವ್ಯಾಪಿಸದಂತೆ ತಹಬದಿಗೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್  ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಡಿಹೆಚ್‍ಒ ಅವರೊಂದಿಗೆ ಜಿಲ್ಲೆಯಾದ್ಯಂತ ಐದು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಲಾಗಿದೆ. ಅಲ್ಲದೇ, ಸಭೆ ನಡೆಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಇನ್ನೂಳಿದ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆ ನೀಡಲಾಗುವುದು ಎಂದರು.

ಗ್ರಾಮೀಣ ಭಾಗಕ್ಕೆ ಕೋವಿಡ್ ಹರಡದಂತೆ ನೋಡಿಕೊಳ್ಳಿ,ಎಲ್ಲರೂ ಒಟ್ಟಾಗಿ ಹತ್ತು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ,ಕೊರೋನ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದರು.

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆಗಳು, ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳು ಮತ್ತು ಮುಂದೆ ಕೈಗೊಳ್ಳಲಿರುವ ಕ್ರಮಗಳ ಕುರಿತು ಉಪಮುಖ್ಯಮಂತ್ರಿಗಳಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್, ಜಿಪಂ ಸಿಇಒ ಕೆ.ಆರ್.ನಂದಿನಿ, ಡಿಎಚ್‍ಒ ಡಾ.ಜನಾರ್ಧನ್,ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಎಎಸ್ಪಿ ಬಿ.ಎನ್.ಲಾವಣ್ಯ, ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಮತ್ತಿತರರ  ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ