ನರೇಗಾ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ಕಲ್ಪಿಸಿ: ಪ್ರಕಾಶ ವಡ್ಡರ
ಲೋಕದರ್ಶನ ವರದಿ
ವಿಜಯಪುರ, ಮೇ.15 : ಪ್ರಸ್ತುತ ಬೇಸಿಗೆ ಇರುವುದರಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಗರಿಷ್ಠ ಕೂಲಿಕಾರರಿಗೆ ಉದ್ಯೋಗ ಒದಗಿಸಿ, ನಿಗದಿತ ಗುರಿಗೆ ತಕ್ಕಂತೆ ಮಾನವ ದಿನಗಳ ಸೃಜನೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚಿಸಿದರು. ಇಂಡಿ ತಾಲೂಕಿನ ಸಭಾ ಭವನದಲ್ಲಿ ಇಂಡಿ ತಾಲೂಕು ಮತ್ತು ಚಡಚಣ ತಾಲೂಕುಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೂಲಿಗಾಗಿ ಬೇಡಿಕೆ ಸಲ್ಲಿಸಿರುವ ಕೂಲಿಕಾರರಿಗೆ ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಉದ್ಯೋಗ ಕಲ್ಪಿಸಬೇಕು. ಉದ್ಯೋಗ ಮಾಡಿರುವ ಕೂಲಿಕಾರರಿಗೆ ವಿಳಂಬ ಮಾಡದೇ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಕೂಲಿ ಪಾವತಿಸಬೇಕು. ನರೇಗಾ ಯೋಜನೆಯಡಿ ನೋಂದಾಯಿತ ಎಲ್ಲ ಕೂಲಿಕಾರರ ಇ-ಕೆವೈಸಿಯನ್ನು ಶೇ.100 ರಷ್ಟು ಇದೇ ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದರು. ಈಗಾಗಲೇ ಪ್ರಗತಿ ಹಂತದ ಸಮುದಾಯಿಕ ಕಾಮಗಾರಿ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಕೂಲಿಕಾರರ ಫೇಸ್ ಅಥೆಂಟಿಕೇಷನ್ ಅನ್ನು ಮಾಡಿಸಲು ಎರಡೂ ತಾಲೂಕುಗಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಗ್ರಾ.ಪಂ ಹಂತದಲ್ಲಿ ಕಡ್ಡಾಯವಾಗಿ ತೆರಿಗೆ ವಸೂಲಾತಿ ಪ್ರಗತಿ ಸಾಧಿಸಬೇಕು. ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಸಿಬ್ಬಂದಿಯವರು ಪ್ರತಿದಿನ ಕಡ್ಡಾಯವಾಗಿ ಇ-ಹಾಜರಾತಿ ಮೂಲಕ ತಮ್ಮ ತಮ್ಮ ಹಾಜರಾತಿ ಸಲ್ಲಿಸಬೇಕು. ಪ್ರತಿದಿನ ಇ-ಹಾಜರಾತಿ ಪ್ರಮಾಣವು ಶೇ.100 ರಷ್ಟು ಇರುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಮಹಿಳಾ ಗ್ರಾಮ ಸಭೆಗಳನ್ನು ಪೂರ್ಣಗೊಳಿಸಬೇಕು. ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳನ್ನು ಸರಿಯಾಗಿ ನಿರ್ವಹಿಸಬೇಕು. ಈ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದರು. ಸಕಾಲದಲ್ಲಿ ಯೋಜನೆ ಪೂರಕವಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯ ಸಾಧಿಸಿ ಕೆಲಸ ಮಾಡಿದರೆ ಎಲ್ಲ ಅಂಶಗಳಲ್ಲೂ ಪ್ರಗತಿ ಹೊಂದಲು ಸಾಧ್ಯ.ವಿದೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೂಲಿಕಾರರು ಸಲ್ಲಿಸಿರುವ ನಮೂನೆ 6ನ್ನು ಕಡ್ಡಾಯವಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ವೀಕರಿಸಬೇಕು. ಈಗಾಗಲೇ ಬೇಡಿಕೆ ಸಲ್ಲಿಸಿರುವ ಕೂಲಿಕಾರರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಲ್ಲ ಕೂಲಿಕಾರರು ಪ್ರತಿ ದಿನ ತಪ್ಪದೇ ಕೆಲಸಕ್ಕೆ ಹಾಜರಾಗಬೇಕು. ಇನ್ನುಳಿದ ಎಲ್ಲ ಕೂಲಿಕಾರರು ನಮೂನೆ 6 ರಲ್ಲಿ ಗ್ರಾ.ಪಂ.ಗೆ ಬೇಡಿಕೆ ಸಲ್ಲಿಸಬೇಕು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸಕ್ಕೆ ಬೇಗನೆ ಬರಬೇಕು. ನಿಮಗೆ ನೀಡಿರುವ ಅಳತೆ ಪ್ರಕಾರ ಕೆಲಸ ಮಾಡಬೇಕು ಎಂದು ಕೂಲಿಕಾರರಿಗೆ ನಿರ್ದೇಶನ ನೀಡಿದರು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರಂತರವಾಗಿ ಕೆಲಸ ಒದಗಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೂಲಿ ಕಾರ್ಮಿಕರಿಗೆ ತಿಳಿಸಿದರು.
ಸಭೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಾನವ ದಿನಗಳ ಗುರಿ ಹಾಗೂ ಸಾಧನೆ , ಕಾಮಗಾರಿ ಬೇಡಿಕೆ, ಮಾನವ ದಿನಗಳ ಸೃಜನೆ, ನಿಗದಿತ ಸಮಯದಲ್ಲಿ ಕೂಲಿ ಪಾವತಿ, ನರೇಗಾ ಕೂಲಿಕಾರರ ಇ-ಕೆವೈಸಿ, ಕಾಮಗಾರಿಗಳ ಮುಕ್ತಾಯ, ನರೇಗಾ ಕೂಲಿಕಾರರ ಎನ್‌ಎಂಎಂಎಸ್ ಫೇಸ್ ಅಥೆಂಟಿಕೇಷನ್, ಯುಕ್ತದಾರ ದಲ್ಲಿ ಕಾಮಗಾರಿ ಎಂಟ್ರಿ ಮಾಡುವುದು, ಕಾಮಗಾರಿ ಮುಕ್ತಾಯ ಸಾಮಾಜಿಕ ಪರಿಶೋಧನೆ, ಪ್ರಗತಿ ವರದಿ, ಅಡಹಾಕ್ ಸಭೆ, ನರೇಗಾ ಕಾಮಗಾರಿಗಳ ಮುಕ್ತಾಯ, ಪಂಚಾಯತ ರಾಜ್ ವಿಷಯಗಳಾದ ತೆರಿಗೆ ವಸೂಲಾತಿ, ಇ-ಹಾಜರಾತಿ, ಮಹಿಳಾ ಗ್ರಾಮ ಸಭೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ವಿವಿಧ ವಿಷಯಗಳ ಕುರಿತು ಪ್ರಗತಿ ಪರೀಶೀಲನೆ ನಡೆಸಿದರು. ಇದಕ್ಕೂ ಮುನ್ನ ಉಪ ಕಾರ್ಯದರ್ಶಿಗಳು ಇಂಡಿ ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನರೇಗಾ ಕಾಮಗಾರಿ ಪರೀಶೀಲಿಸಿದರು. ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹದೇವಪ್ಪ ಏವೂರ, ಚಡಚಣ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶೋಕಕುಮಾರ ರಾಠೋಡ, ಇಂಡಿ ತಾಲೂಕಿನ ಸಹಾಯಕ ನಿರ್ದೇಶಕ ಸಂಜಯ ಖಡಗೆಕರ, ಸಹಾಯಕ ನಿರ್ದೇಶಕರು (ಪಂ.ರಾ) ಎರಡೂ ತಾಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಇಂಡಿ ಮತ್ತು ಚಡಚಣ ತಾಲೂಕಿನ ನರೇಗಾ ಸಿಬ್ಬಂದಿ ಹಾಜರಿದ್ದರು.