ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ
ಬಳ್ಳಾರಿ 26: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಒತ್ತಾಯಿಸಿ ಇಂದು ದೇಶವ್ಯಾಪಿ ಪ್ರತಿಭಟನೆಯನ್ನು ಭಾರತ್ ಬಂದ್ ರೂಪದಲ್ಲಿ ನಾಡಿನಾದ್ಯಂತ ನಡೆಸಲಾಗಿದ್ದು, ಇದರ ಅಂಗವಾಗಿ ಬಳ್ಳಾರಿಯಲ್ಲಿ ಎಐವೈಎಫ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್ ಅವರು, ಕೃಷಿ ಕಾಯ್ದೆಗಳು ಸಂಪೂರ್ಣವಾಗಿ ಜನವಿರೋಧಿ ಹಾಗೂ ಬಡವರ ವಿರೋಧಿ ಕ್ರಮವಾಗಿದ್ದು, ಕೇಂದ್ರದಲ್ಲಿ ಅಧಿಕಾರ ನಡೆಸುವ ಬಿಜೆಪಿ ಪಕ್ಷವು ಈ ಒಂದು ಕಾಯ್ದೆಗಳ ಬೆಂಬಲಕ್ಕೆ ನಿಂತಿರುವುದು ಆಳುವ ಪಕ್ಷದ ದಿವಾಳಿಕೋರ ನೀತಿಗಳಿಗೆ ಹಿಡಿದ ಕೈಗನ್ನಡಿಯಂತಿದೆ ಎಂದು ಬಣ್ಣಿಸಿದರು. ಕೃಷಿ ಕಾಯ್ದೆಗಳಿಗೆ ಅನುಬಂಧವಾಗಿ ಎಪಿಎಂಸಿ ಕಾಯ್ದೆ ಸಹ ತಿದ್ದುಪಡಿ ಮಾಡಲಾಗಿ ಇದರ ಪರಿಣಾಮ ಎಪಿಎಂಸಿಗಳು ಖಾಸಗೀಕರಣಗೊಳ್ಳುವುದೊಂದಿಗೆ ನಾಡಿನಾದ್ಯಂತ ಸಣ್ಣ ಪ್ರಮಾಣದ ರೈತರ ಬದುಕು ಕಂಗಾಲಾಗಿದೆ. ಇದೇರೀತಿ ಪಡಿತರ ವ್ಯವಸ್ಥೆಗೆ ಅಕ್ಕಿ ಮತ್ತು ಧಾನ್ಯಗಳನ್ನು ಪೂರೈಸುವಂತಹ ಭಾರತೀಯ ಆಹಾರ ನಿಗಮ (ಎಫ್ಸಿಐ) ಗೋದಾಮುಗಳನ್ನು ಸಹ ಖಾಸಗೀಕರಣಗೊಳಿಸಿರುವುದು ಮುಂದಿನ ದಿನಗಳಲ್ಲಿ ನಾಡಿನ ಆಹಾರ ಸುರಕ್ಷೆ, ಐಸಿಡಿಎಸ್ ಸೇರಿದಂತೆ ಒಟ್ಟಾರೆ ಬಡತನ ನಿರ್ಮೂಲನೆ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಕೈಬಿಟ್ಟಂತಾಗಿದೆ. ಅದೇಕಾರಣದಿಂದ ನಾಡಿನ ಯುವಜನರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಎಲ್ಲಾ ಜನವಿಭಾಗಗಳು ಈ ಒಂದು ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿ ಹೋರಾಟಕ್ಕೆ ಧುಮುಕಬೇಕಾದ ಅನಿವಾರ್ಯ ಪರಿಸ್ಥಿರಿ ಬಂದೊದಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಹೆಚ್.ಎ.ಆದಿಮೂರ್ತಿ, ಎಐವೈಎಫ್ ಜಿಲ್ಲಾಧ್ಯಕ್ಷ ಕಟ್ಟೇಬಸಪ್ಪ, ಮುದುಕಪ್ಪ, ವಿಶ್ವನಾಥ, ವೀರೇಶ್, ಮಲ್ಲಪ್ಪ, ಈರಣ್ಣ, ವೀರೇಶ್ ಸೋಮಸಮುದ್ರ, ಮುಕ್ಕಣ್ಣ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.