ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಬ್ಯಾಡಗಿ 2: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ನೇತೃತ್ವದಲ್ಲಿ ರೈತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಕಚೇರಿಯಿಂದ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ನಾಲ್ಕಾರು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಫಸಲ್ ಬಿಮಾ ಯೋಜನೆಯಡಿ ಬಾಕಿ ಇರುವ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ವಿಮಾ ಕಂಪನಿಗಳು ಮಾನವೀಯತೆ ತೋರಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕಳೆದ ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎನ್ಡಿಆರ್‌ಎಫ್ ಮತ್ತು ಎಸ್ಡಿಆರ್‌ಎಫ್ ನಿಯಮಗಳನ್ನು ಸಡಿಲಗೊಳಿಸಿ ಸಮರ್ಕ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರು ಮಾತನಾಡಿ, ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೈತರು ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ರಾಜಕಾರಣಿಗಳ ಮುಖಂಡರ ಕರೆಗಳಿಗೆ ಮಾತ್ರ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಾರೆ ಎಂದು ದೂರಿದರು. ರೈತರಿಗೆ ಹಗಲು ವೇಳೆ ಏಳು ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಗಂಗಣ್ಣ ಎಲ್., ಚಿಕ್ಕಪ್ಪ ಛತ್ರದ, ಮೌನೇಶ ಕಮಾರ್, ಫಕೀರೇಶ ಅಜಗೊಂಡರ, ಜಾನ್ ಪುನೀತ್, ಪ್ರಕಾಶ ಸಿದ್ಧಪ್ಪನವರ, ನಿಂಗಪ್ಪ ಹೆಗ್ಗಣ್ಣನವರ, ಕೆ.ವಿ. ದೊಡ್ಡಗೌಡ್ರು ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಹಲವರು ರೈತರು ಭಾಗವಹಿಸಿದ್ದರು.