ಬಳ್ಳಾರಿ

ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ 29: ನಗರದಲ್ಲಿ  ಂಋಖಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ನಗರದ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿತ ಗೊಂದಲಗಳನ್ನು ಪರಿಹರಿಸಲು ಆಗ್ರಹಿಸಿ ಎಸ್‌ಸಿ, ಎಸ್‌ಟಿ ಬಿಸಿಎಮ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು.  


ಈ ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರು ರವಿಕಿರಣ್‌.ಜೆ.ಪಿ ಅವರು ಮಾತನಾಡುತ್ತಾ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದಾಗಿ ಶುಲ್ಕ ವಿನಾಯಿತಿಯನ್ನು ಜಾರಿಗೆ ತಂದು ಅತ್ಯಂತ ಕಡಿಮೆ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವ ವ್ಯವಸ್ಥೆಯಾಗಿದೆ. ಇನ್ನುಳಿದ ಶುಲ್ಕವನ್ನು ಇಲಾಖೆಯಿಂದ ಕಾಲೇಜಿನ ಖಾತೆಗೆ ಪಾವತಿಸಲಾಗುತ್ತಿತ್ತು. ಇದರಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿತ್ತು.ಆದರೆ ಕೆಲವು ವರ್ಷಗಳಿಂದ ರಾಜ್ಯ ವಿದ್ಯಾರ್ಥಿಗಳ ಪೋರ್ಟಲ್(ಎಸ್‌ಎಸ್‌ಪಿ) ಅನ್ನು ಜಾರಿಗೆ ತಂದಂದಿನಿಂದ ಕಾಲೇಜುಗಳಿಗೆ ಪಾವತಿಯಾಗಬೇಕಿದ್ದ ಬಾಕಿ ಶುಲ್ಕ ಪಾವತಿಯಾಗುತ್ತಿಲ್ಲ ಎಂದು ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕವನ್ನು ಪಡೆಯಲು ಕಾಲೇಜುಗಳು ಮುಂದಾಗಿವೆ ಎಂದು ಆರೋಪಿಸಿದರು.  


ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಮಾತನಾಡಿ ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಭಾಗದ ಬಡ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಸುಮಾರು 5000ರೂ.ಗಳ ಪ್ರವೇಶ ಶುಲ್ಕವನ್ನು ಕಾಲೇಜುಗಳಿಂದ ಸಂಗ್ರಹಿಸಲಾಗುತ್ತಿದೆ. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ರೈತ ಹಾಗೂ ಕಾರ್ಮಿಕರ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಾಗಿರುತ್ತಾರೆ. ಈಗಾಗಲೇ ಪಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು ಒಮ್ಮಿಂದೊಮ್ಮೆಲೆ ಸಾವಿರಾರು ರೂಪಾಯಿಯಷ್ಟು ಪ್ರವೇಶ ಶುಲ್ಕವು ವಿದ್ಯಾರ್ಥಿಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಅಲ್ಲದೇ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲದಿರುವುದು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಕಷ್ಟಕ್ಕೆ ದೂಡಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ವಿದ್ಯಾರ್ಥಿಗಳ ಈ ಪರಿಸ್ಥಿತಿಯನ್ನು ಪರಿಗಣಿಸಿ ಅವರಿಗೆ ವಿದ್ಯಾರ್ಥಿ ವೇತನದ ಜೊತೆಯಲ್ಲಿ ಬರಬೇಕಾದ ಶುಲ್ಕ ವಿನಾಯಿತಿಯ ಮೊತ್ತವು ಬರುವ ತನಕ ಯಾವುದೇ ರೀತಿಯಾಗಿ ಪೂರ್ಣ ಪ್ರಮಾಣದ ಶುಲ್ಕವನ್ನು ಕಾಲೇಜಿನಿಂದ ಕಟ್ಟಿಸಿಕೊಳ್ಳಬಾರದೆಂದು ಮತ್ತು ಅವರ ಸಂಕಷ್ಟಗಳನ್ನು ಪರಿಗಣಿಸಿ ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿತ ಗೊಂದಲಗಳನ್ನು ಪರಿಹರಿಸಬೇಂದು ಮನವಿ ಮಾಡಿದರು. 


ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷ ಜೆ.ಸೌಮ್ಯ, ಕೆ.ಈರಣ್ಣ, ಸೆಕ್ರೆಟರಿಯೇಟ್ ಸದಸ್ಯರು ಎಂ.ಶಾಂತಿ, ಸಿದ್ದು, ನಿಹಾರಿಕ, ಪ್ರಮೋದ್, ಉಮಾ ಮತ್ತು ವಿದ್ಯಾರ್ಥಿಗಳು ಅದಿ, ಸಿದ್ದಯ್ಯ, ಚಂದ್ರ, ಧರ್ಮ ಮತ್ತಿತರರು ಭಾಗವಹಿಸಿದ್ದರು. 


ಸುದ್ದಿ ಓದಿ