ಮುಂದಗೋಡ

ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಅತ್ತಿವೇರಿ, ದೇಶಪಾಂಡೆನಗರ, ಗೌಳಿದಡ್ಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಬಸ್ ನಿಲ್ದಾಣದ ಒಳಗೆ ಯಾವುದೆ ಬಸ್ ಬರದಂತೆ ಮತ್ತು ನಿಲ್ದಾಣದಿಂದ ಬಸ್ ಹೊರಗೆ ಹೋಗದಂತೆ ತಡೆದು ಪ್ರತಿಭಟನೆ ನಡೆಸಿ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂಡಗೋಡ ಮತ್ತು ಪೊಲೀಸ್ ನೀರೀಕ್ಷಕರಿಗೆ ಮನವಿ ಸಲ್ಲಿಸಿದರು.   

ನಮ್ಮ ಊರುಗಳಿಗೆ ಯಾವುದೆ ಬಸ್ ಸೌಕರ್ಯ ಇರುವುದಿಲ್ಲ. ಬೇರೆ ಊರಿಗೆ ಹೋಗುವುದಾದರೆ ನಡೆದುಕೊಂಡು ಹುನಗುಂದಕ್ಕೆ ಬರಬೇಕು. ದಟ್ಟವಾದ ಅಡವಿ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಮತ್ತು ಮಹಿಳೆಯರಿಗೆ ವೃದ್ಧರಿಗೆ ಆಸ್ಪತ್ರೆಗೆ ಹೋಗಲು ತೊಂದರೆಯಾಗಿದೆ. ಪ್ರಾಣಿಗಳ ಭಯ ಇದೆ. ಅತ್ತಿವೇರಿಯಿಂದ ದೇಶಪಾಂಡೆ ನಗರ 3ಕಿ.ಮೀ. ಮತ್ತು ಅತ್ತಿವೇರಿಯಿಂದ ಗೌಳಿದಡ್ಡಿ 3ಕಿ.ಮೀ. ಅಂತರದಲ್ಲಿದ್ದು ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಹೆಣ್ಣುಮಕ್ಕಳು ಮತ್ತು ವಿದ್ಯಾರ್ಥಿನಿಯರು ನಡೆದುಕೊಂಡು ಹುನಗುಂದ ಗ್ರಾಮಕ್ಕೆ ಬಂದು ಬಸ್ ಹತ್ತಬೇಕಾಗಿದೆ. ಕಲಘಟಗಿಯಿಂದ ಹೋಗುವ ಮತ್ತು ಬರುವ ಬಸ್‌ಗಳು ಅತ್ತಿವೇರಿ, ದೇಶಪಾಂಡೆನಗರ ಮತ್ತು ಗೌಳಿದಡ್ಡಿಯ ಮೂಲಕ ಬಂದು ಹೋಗುವ ವ್ಯವಸ್ಥೆಯಾಗಬೇಕು. ಮುಂಜಾನೆ 8.30ಕ್ಕೆ ಮತ್ತು ಸಾಯಂಕಾಲ 4.45ಕ್ಕೆ ಎರಡು ಬಸ್ ವ್ಯವಸ್ಥೆ ಮಾಡಬೇಕು. ಬಸ್ ವ್ಯವಸ್ಥೆ ಮಾಡಲು ಮನವಿಯನ್ನು ಸಲ್ಲಿಸಿದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.  

ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ವಾಹನ ಸಂಚಾರ ತಡೆ ನಡೆಸಿ ನಂತರ ಸುಮಾರು 5 ಗಂಟೆಗಳ ಕಾಲ ಬಸ್ ನಿಲ್ದಾಣದ ಒಳಗೆ ಯಾವುದೆ ಬಸ್ ಬರದಂತೆ ಮತ್ತು ನಿಲ್ದಾಣದಿಂದ ಬಸ್ ಹೊರಗೆ ಹೋಗದಂತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ಸಂಚಾರ ನೀರೀಕ್ಷಕ ಎಚ್‌.ವೈ.ಚಲವಾದಿ ಸ್ಥಳಕ್ಕೆ ಬಂದು ಒಂದು ವಾರದೊಳಗಾಗಿ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಈ ವೇಳೆ ಬಸವರಾಜ ಆಸ್ತಕಟ್ಟಿ, ಕೆ.ಎನ್‌.ಪಠಾಣ, ಪೀರ್‌ಸಾಬ ಮತ್ತಿಗಟ್ಟಿ, ಚನ್ನಯ್ಯ ದುರ್ಗದಮಠ, ನಾಗರಾಜ ಬೊಡೇಕರ, ಇಸ್ಮಾಯಿಲ್, ಚನ್ನಯ್ಯ, ಮೌಲಾಸಾಬ ಒಂಟಿ, ಜಿ.ಬಿ.ಅರಳಿಕಟ್ಟಿ, ಇಮಾಮಸಾಬ, ಮಂಜುನಾಥ ನೀರಲಗಿ, ಹುಸೇನ್‌ಸಾಬ, ಬಸವರಾಜ, ಬಸಪ್ಪ ತಳವಾರ ಮತ್ತು ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ