ತಾಳಿಕೋಟಿ

ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ತಾಳಿಕೋಟೆ : ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. 

ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಪರಿಶಿಷ್ಠ ಜಾತಿಯ ಮೂಲ ಅಸ್ಪೃಸ್ಯರನ್ನು ಉಳಿಸಿ ಉಳಿದ ಜಾತಿಯನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಕೈಬಿಡಬೇಕು. ಅಂಬೇಡ್ಕರ ಅಭಿವೃದ್ದಿ ನಿಗಮದಿಂದ ಎಲ್‌ಪಿಎಸ್ ಯೋಜನೆಯು ಕಳೆದ ನಾಲ್ಕು ವರ್ಷಗಳಿಂದ ಅರ್ಜಿ ನಿಂತು ಹೋಗಿವೆ. ಕೂಡಲೇ ಎಲ್‌ಪಿಎಸ್ ಯೋಜನೆಗೆ ಅನುದಾನ ಬಿಡುಗಡೆಗೊಳಿಸ ಫಲಾನುಭವಿಗಳಿಗೆ ಅನಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿಎಸ್‌ಎಸ್ ಬೆಳಗಾವಿ ವಿಭಾಗದ ಸಂಘಟನಾ ಸಂಚಾಲಕ ದೇವಿಂದ್ರ ಹಾದಿಮನಿ, ಕರವೇ ಮುಖಂಡ ಜೈಭೀಮ ಮುತ್ತಗಿ ಮಾತನಾಡಿ, ಕಳೆದ ಬಾರಿ ಸಿದ್ದರಾಮಯ್ಯನವರು ವರದಿ ಜಾರಿಗೊಳಿಸುವದಾಗಿ ಭರವಸೆ ನೀಡಿ ಕೈಬಿಟ್ಟಿದ್ದರಿಂದ ಅವರಿಗೆ ತಕ್ಕ ಪಾಠ ಕಲಿಸಿದ್ದೇವೆ. ಇದನ್ನ ಮನಗಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಇಲ್ಲದಿದ್ದರೆ ವಿಧಾನ ಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದರು. 

ಇದಕ್ಕೂ ಮುನ್ನ ಪಟ್ಟಣದ ಡಾ.ಬಿ.ಆರ್,ಅಂಬೇಡ್ಕರ ಭವನದಿಂದ ಆರಂಭವಾದ ಪ್ರತಿಭಟನೆ ಅಂಬೇಡ್ಕರ ವೃತ್ತ, ಕತ್ರಿ ಬಜಾರ, ಶಿವಾಜಿ ವೃತ್ತ, ಬಸ್ ನಿಲ್ದಾಣದ ಮೂಲಕ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಕೈಕೊಳ್ಳಲಾಯಿತು. ಉಪ ತಹಶಿಲ್ದಾರ ಜಗದೀಶ ಜೈನಾಪೂರ ಅವರು ಮನವಿಯನ್ನು ಸ್ವಿಕರಿಸಿದರು. 

ಈ ಸಂದರ್ಭದಲ್ಲಿ ವಿವಿಧ ದಲಿತಪರ ಸಂಘಟನೆಗಳ ಅಧ್ಯಕ್ಷ, ಪುರಸಭೆ ಸದಸ್ಯ ಮುತ್ತಪ್ಪ ಚಮಲಾಪೂರ, ತಿಪ್ಪಣ್ಣ ಅಸ್ಕಿ, ಪರಶುರಾಮ ಕೂಚಬಾಳ, ಮಲ್ಲು ತುಂಬಗಿ, ಮಲ್ಲು ದೊಡಮನಿ, ಬಾಗಪ್ಪ ಬಿಳೆಭಾವಿ, ಸುನೀಲ ಕಲಕೇರಿ, ಮಾಳಪ್ಪ ಬಿಳೆಭಾವಿ, ಗುರು ಪ್ರಸಾದ.ಬಿ.ಜಿ, ಗೋಪಾಲ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ಯಮನಪ್ಪ ಹಿರೂರ, ಸೋಮು ಹಗರಗುಂಡ, ಎಮ್‌.ಆರ್‌.ದೊಡಮನಿ ಸೇರಿದಂತೆ ಇತರರು ಇದ್ದರು. ತಾಳಿಕೋಟೆ ಪಟ್ಟಣದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಯಿತು. 


ಸುದ್ದಿ ಓದಿ