ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಕಂಪ್ಲಿ 23: ಗ್ರಾಮ ವಾಸ್ತವ್ಯದ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶದಿಂದ ಗ್ರಾಪಂ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಭಾಸ್ಕರರೆಡ್ಡಿ ತಾಲೂಕಿನ ಸಣಾಪುರ ಗ್ರಾಪಂ ಕಚೇರಿಗೆ ಶುಕ್ರವಾರ ಮಧ್ಯಾಹ್ನ ಬೀಗ ಜಡಿದು ಪ್ರತಿಭಟಿಸಿದರು. ವಿಷಯ ತಿಳಿದು ತಾಪಂ ಇಓ ಮೊಹಮ್ಮದ್ ಖಿಜರ್ ಸ್ಥಳಕ್ಕೆ ಆಗಮಿಸಿದರು.
2021ರ ಫೆಭ್ರವರಿ 23ರಂದು ನಂ.2 ಮುದ್ದಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಜರುಗಿದ್ದು, ರಸ್ತೆ, ಚರಂಡಿ, ಶಿಥಿಲಗೊಂಡ ವಿದ್ಯುತ್ ಕಂಬ ಬದಲಿಸಿ, ಗ್ರಾಮ ವಾಸ್ತವ್ಯದಲ್ಲಿ ಹಳೆ ವಿದ್ಯುತ್ ತಂತಿ ಬದಲಿಸಿ, ಪಟ್ಟಾ, ನಿವೇಶನ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಈತನಕವೂ ಯಾವುದೇ ಬೇಡಿಕೆ ಈಡೇರಿಲ್ಲ. ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ಆದಂತಾಗಿದೆ. ಮತ ನೀಡಿದ ಜನತೆಗೆ ಮೂಲಸೌಕರ್ಯ ಒದಗಿಸಲು ವಿಫಲವಾಗಿದ್ದು ನನ್ನ ಮನಸ್ಸಿಗೆ ನೋವಾಗಿದೆ. ತಾಂತ್ರಿಕ ಸಹಾಯಕಿಯು ಕಳೆದ ಆರೆಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಗ್ರಾಪಂ ಸದಸ್ಯರನ್ನು ಕಡೆಗಣಿಸುತ್ತಾರೆ. ಕೆಲಸ ಮಾಡದ ತಾಂತ್ರಿಕ ಸಹಾಯಕಿಯನ್ನ ಇಲ್ಲಿಂದ ವರ್ಗ ಮಾಡಬೇಕು. ನನ್ನ ಗ್ರಾಪಂ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತೇನೆ. ನನ್ನ ಬೇಡಿಕೆ ಈಡೇರಿಕೆಗೆ ಸೂಕ್ತ ಭರವಸೆ ನೀಡುವತನಕ ಕಚೇರಿ ಬೀಗ ತೆರೆಯುವುದಿಲ್ಲ ಎಂದು ಭಾಸ್ಕರರೆಡ್ಡಿ ಪಟ್ಟು ಹಿಡಿದರು. ಗ್ರಾಪಂ ಸದಸ್ಯರಾದ ಬಸವರಾಜಗೌಡ, ವೆಂಕಟೇಶ್ ಬೆಂಬಲಿಸಿ ಧ್ವನಿಗೂಡಿಸಿದರು.ಎಡಿ ಮಲ್ಲನಗೌಡ ಮಾತನಾಡಿ, ಗ್ರಾಪಂಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಆಧ್ಯತೆ ನೀಡಬೇಕು ಎಂದು ಪಿಡಿಓಗೆ ಸೂಚನೆ ನೀಡಿದರು.ತಾಪಂ ಇಓ ಮೊಹಮ್ಮದ್ ಖಿಜರ್ ಮಾತನಾಡಿ, ನಿಮ್ಮ ಬೇಡಿಕೆಗಳನ್ನ ನನ್ನ ಗಮನಕ್ಕೆ ತಂದಿಲ್ಲ. ವಾರದೊಳಗೆ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ಪ್ರತಿಭಟನಕಾರರ ಮನವೊಲಿಸಿದಾಗ ಬೀಗ ತೆರೆಯಲಾಯಿತು.ಪಿಎಸ್ ಐ ವಿರುಪಾಕ್ಷಪ್ಪ, ತಾಪಂ ಎಡಿ ಮಲ್ಲನಗೌಡ, ಪಿಡಿಒ ಎಚ್.ಶೇಷಗಿರಿ, ಕಾರ್ಯದರ್ಶಿ ದೊಡ್ಡಬಸಪ್ಪ ಇತರರಿದ್ದರು.