ಕೊಪ್ಪ ಗ್ರಾಮದಲ್ಲಿ ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಇಂದೂರ ಗ್ರಾ.ಪಂ. ವ್ಯಾಪ್ತಿಯ ಕೊಪ್ಪ ಗ್ರಾಮ ಮುಂಡಗೋಡ-ಕಲಘಟಗಿ ಮಾರ್ಗದಲ್ಲಿದ್ದು ಗ್ರಾಮದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ಆದರೆ ಪ್ರಯಾಣಿಕರಿಗೆ ಬಸ್ ನಿಲ್ದಾಣವಿಲ್ಲದ ಕಾರಣ ರಸ್ತೆ ಪಕ್ಕದ ಅಂಗಡಿಗಳ ಬಾಗಿಲಲ್ಲಿ ಬಸ್ ಕಾಯುತ್ತಾ ನಿಲ್ಲಬೇಕು ಅಥವಾ ಸುಡು ಬಿಸಿಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕೊಪ್ಪ ಗ್ರಾಮದಲ್ಲಿ ಬಸ್ ನಿಲ್ದಾಣ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಸಾರಿಗೆ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ನಿಲ್ದಾಣಕ್ಕಾಗಿ ಬಸ್ ತಡೆದು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಮನವೊಲಿಕೆ ಮಾಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.