ಸಮರ್ಪಕ ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ತಾಲೂಕಿನ ವಿವಿಧ ಗ್ರಾಮಗಳ ರೈತರಿಂದ ಕೃಷಿ ಇಲಾಖೆಗೆ ಮುತ್ತಿಗೆ
ಬೈಲಹೊಂಗಲ 30: ರೈತರಿಗೆ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಇಲಾಖೆಗೆ ತೆರಳಿ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬೈಲವಾಡ ಗ್ರಾಮದಲ್ಲಿ ಪ್ರವಾಹದಿಂದ ಬೆಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಇತ್ತಿಚೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಕೃಷಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳೆ ಹಾನಿ ಪರಿಹಾರ ವಿತರಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಳಂಬ ನೀತಿ ತಾಳಿದ್ದಾರೆ. ಬೆಳೆ ಹಾನಿ ಪರಿಹಾರ ಕೇಳಿದರೆ ಸಮಜಾಯಿಸಿ ನೀಡಿ ರೈತರನ್ನು ಸಾಗು ಹಾಕಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ಬೈಲವಾಡ ಗ್ರಾಮದ ರೈತ ಮಹಾಬಳೇಶ್ವರ ಪಾಟೀಲ ಮಾತನಾಡಿ, 'ಬೆಳಗಾವಿ ಜಿಲ್ಲೆಗೆ 22 ಕೋಟಿ ರೂ. ಬೆಳೆ ಹಾನಿ ಬಂದಿದೆ. ಆದರೆ ಬೈಲವಾಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಭಾರಿ ಪ್ರಮಾಣದ ಮೋಸ ಮಾಡಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಕೃಷಿ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಒಂದು ತಿಂಗಳಿಂದ ಬೆಳೆ ಹಾನಿ ಪರಿಹಾರ ನೀಡುವಂತೆ ಹೋರಾಟ ನಡೆಸಲಾಗುತ್ತಿದೆ. ಒಬ್ಬ ಸಾಮಾನ್ಯ ರೈತ ಹೋರಾಟ ಮಾಡಿ ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಅಸಾಧ್ಯವಾಗಿದೆ. ವಿಮಾ ಕಂಪನಿಗಳಿಗೆ ಕೃಷಿ ಅಧಿಕಾರಿಗಳು ಹೆದರಿ ನಡುಗುತ್ತಿದ್ದಾರೆ. ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೂ ಬೆಲೆ ಕೊಟ್ಟಿಲ್ಲ. ಕೊಟ್ಟಿ ದಾಖಲೆ ಸೃಷ್ಠಿಸಿ ರೈತರ ಸುಳ್ಳು ಸಹಿ ಮಾಡಿಸಿಕೊಂಡಿದ್ದಾರೆ. ಕೋಟ್ಯಾಂತರ ರೂ.ಅವ್ಯವಹಾರ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ರೈತರ ಗೋಳು ಆಲಿಸಿ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ರೈತರಾದ ದೀಪಕ ಕುಡಸೋಮಣ್ಣವರ, ಶಂಕರ ಸಂಪಗಾಂವ, ಬಸಪ್ಪ ಹೊಸೂರ, ಸಂತೋಷ ಮುದಕನಗೌಡರ, ಸುಭಾಷ ಮುದಕನಗೌಡರ, ಗದಿಗೆಪ್ಪ ಮುದಕನಗೌಡರ, ಬಸವರಾಜ ಮದ್ನಳ್ಳಿ, ಸೋಮಶೇಖರ ಮದ್ನಳ್ಳಿ, ಪ್ರಶಾಂತ ಪಾಟೀಲ, ಬಸವರಾಜ ಗಿರೆಪ್ಪಗೌಡರ, ರಾಜಶೇಖರ ಯಲ್ಲಪ್ಪಗೌಡರ, ಕಾಶಿನಾಥ ಹಿರೇಮಠ, ರುದ್ರಪ್ಪ ಗಾಡದ, ಅನೇಕರು ಇದ್ದರು