ಹುನಗುಂದ

ನರೇಗಾ ಕೂಲಿ ತಾರತಮ್ಯ ಖಂಡಿಸಿ ಕಾರ್ಮಿಕರ ಧರಣಿ

ನರೇಗಾ ಕೂಲಿ ತಾರತಮ್ಯ ಖಂಡಿಸಿ ಕಾರ್ಮಿಕರ ಧರಣಿ

ಹಿರೇಬಾದವಾಡಗಿ ಗ್ರಾಮ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ | ಅಧಿಕಾರಿಗಳ ಭರವಸೆ ಬಳಿಕ ಧರಣಿ ವಾಪಸ್‌

ಹುನಗುಂದ 05: ತಾಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯತಿಯ ಸಿಬ್ಬಂದಿ ನರೇಗಾ ಕೂಲಿ ನೀಡುವಲ್ಲಿ ವೇತನ ತಾರತಮ್ಯ ಎಸಗಿದ್ದಾರೆಂದು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಮಹಿಳೆಯರು, ಸೇರಿದಂತೆ ನೂರಾರು ಕಾರ್ಮಿಕರು ಧರಣಿ ನಡೆಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಹೂಳೆತ್ತುವುದು ಮತ್ತು ಮುಳ್ಳು ಕಂಟಿ ಸ್ವಚ್ಛಗೊಳಿಸುವ ಕಾಂಗಾರಿ 4 ದಿನ ಕೈಗೊಳ್ಳಲಾಗಿತ್ತು. ಈ ಕೆಲಸದಲ್ಲಿ ಪಾಲ್ಗೊಂಡಿದ್ದ ಕೂಲಿ ಕಾರ್ಮಿಕರಿಗೆ ನಿಗದಿಯಂತೆ 275 ರೂ. ನೀಡದೆ ಗ್ರಾ.ಪಂ.ವ್ಯಾಪ್ತಿಯ ವೀರಾಪೂರ, ಬನ್ನಹಟ್ಟಿ ಗ್ರಾಮದ ಕೂಲಿ ಕಾರ್ಮಿಕರಿಗೆ 104 ರೂ. ಮತ್ತು ಚಿತ್ತವಾಡಗಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಗ್ರಾಮಗಳ ಕೂಲಿ ಕಾರ್ಮಿಕರಿಗೆ 172 ರೂ.ನೀಡಲಾಗಿದ್ದು ಜತಗೆ ಗ್ರಾ.ಪಂ ಅಧಿಕಾರಿಗಳ ಬೇಜವಾಬ್ದಾರಿಯಿಂದ 6-8 ತಿಂಗಳಿಂದ ಕೆಲ ಕೂಲಿ ಕಾರ್ಮಿಕರ ವೇತನ ಪಾವತಿಸಿಯೇ ಇಲ್ಲ ಎಂದು ಆರೋಪಿಸಿದರು.

ಇದನ್ನು ಸರಿಪಡಿಸದ ಹೊರತು ನಾವು ಕುಳಿತ ಜಾಗ ಬಿಟ್ಟು ಕದಲುವುದಿಲ್ಲ ಎಂದು ಕೂಲಿ ಕಾರ್ಮಿಕರು ಗ್ರಾ.ಪಂ ಪಿಡಿಓ ಎಂ.ಎ ಪೀರಾಪೂರ ಮತ್ತು ಪಂಚಾಯತಿ ಸಹಾಯಕ ತಾಂತ್ರಿಕ ಅಧಿಕಾರಿ ರೇಣುಕಾ ಅಂಗಡಿ ಅವರ ಎದುರು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಓ ಎಂ.ಎಂ.ತುಮ್ಮರಮಟ್ಟಿ ಪ್ರತಿಭಟನಾ ಸ್ಥಳಕ್ಕೆ ಭೆಟ್ಟಿ ನೀಡಿ ಮಾತನಾಡಿ, ತಪ್ಪೆಸಗಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುತ್ತೇನೆ. ಘಟನೆ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗವುದು. ಪ್ರತಿ ಸೋಮವಾರ ತಾಲ್ಲೂಕಿನ ಗ್ರಾ.ಪಂ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕುರಿತು ಪ್ರಗತಿ ಪರೀಶಿಲನೆ ಸಭೆ ನಡೆಸಲಾಗವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದರು.

ಮಹಾಂತೇಶ ಹೊಸಮನಿ, ಬಸಯ್ಯ ರತ್ನಮ್ಮ ಕುಂಬಾರ, ಮಹಾದೇವಿ ಹಡಪದ, ಗೀತಾ ವಾಲಿಕಾರ, ದೇವಮ್ಮ ಪಾಟೀಲ, ಶಾರದಾ ವಾಲಿಕಾರ, ಸುನಂದಾ ಹಳ್ಳೂರ, ಪ್ರಭು ಹಳ್ಳೂರ, ಶಿವಪ್ಪ ಕುಂಬಾರ, ಭರಮಪ್ಪ ಮಾದರ, ಬಸವರಾಜ ಮಾದರ, ಗಂಗಮ್ಮ ವಸ್ತ್ರದ, ಸಂಗನಬಸಮ್ಮ ಪಾಟೀಲ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ