ಸನವಳ್ಳಿ ಗ್ರಾಮದ ನಿವೇಶನದಾರರ ಪ್ರತಿಭಟನೆ
ಮುಂಡಗೋಡ 19: ತಾಲೂಕಿನ ಸನವಳ್ಳಿ ಗ್ರಾಮದ ಸರ್ವೇ ನಂ 51 ರಲ್ಲಿ ಸರ್ಕಾರ ಬಡವರಿಗಾಗಿ ಸೂರು ಕಲ್ಪಿಸಿಕೊಳ್ಳಲು ಮಂಜೂರಿ ಮಾಡಿದ ಜಮೀನನ್ನು ಒತ್ತುವರಿ ಮಾಡಿಕೊಂಡವರನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಸನವಳ್ಳಿ ಗ್ರಾಮದ ನಿವೇಶನದಾರರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಭೂಮಿ ಒತ್ತುವರಿದಾರರ ವಿರುದ್ದ ಘೋಷಣೆ ಮೊಳಗಿಸುತ್ತ ಸಂಚರಿಸಿ ಮಿನಿವಿಧಾನಸೌದಕ್ಕೆ ತೆರಳಿ ಮನವಿ ಸಲ್ಲಿಸಲಾಯಿತು. ಸನವಳ್ಳಿ ಗ್ರಾಮ ಸರ್ವೆ ನಂ 51 ರಲ್ಲಿ 1.18 ಎಕರೆ ಭೂಮಿಯಿದ್ದು, ಸರ್ಕಾರ ನಿವೇಶನ ರಹಿತ 16 ಜನ ಪಲಾನುಭವಿಗಳಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸ್ತವ್ಯ ಹೂಡುವ ಉದ್ದೇಶದಿಂದ ನಿವೇಶನ ಹಕ್ಕು ಪತ್ರದ ಮೂಲಕ 1-1-1992 ರಲ್ಲಿ ಭೂ ಮಂಜೂರಾತಿ ನೀಡಿದೆ
ಸರ್ಕಾರದಿಂದ ನಿವೇಶನ ಮಂಜೂರಿ ಹಕ್ಕು ಪ್ರತ ಪಡೆದ 16 ಜನರು ತಮಗೆ ಮಂಜೂರಿಯಾದ ಭೂಮಿಯಲ್ಲಿ ಮನೆ ಕಟ್ಟಲು ಹೋದರೆ ಜಮೀನಿನ ಅಕ್ಕಪಕ್ಕದ ಜಮೀನು ಮಾಲೀಕರಾದ ಶಿವಲಿಂಗಪ್ಪ ಕಳಸಗೇರಿ ಹಾಗೂ ಭೀಮಣ್ಣ ಭೈರಣ್ಣವರ ಹಾಗೂ ಅವರ ಮಕ್ಕಳು ತಂಟೆ ತಕರಾರು ಮಾಡಿ ಅಡ್ಡಿಪಡಿಸುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ಪೊಲೀಸ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿರಹಿಸಿಕೊಡುವಂತೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದು, ತಾಲೂಕಿನ ಇತರೇ ಗ್ರಾಮಗಳಲ್ಲಿ ಒತ್ತುವರಿಯಾದ ಸರ್ಕಾರಿ ಜಮೀನನ್ನು ತೆರವುಗೊಳಿಸಿರುವ ಕಂದಾಯ ಮತ್ತು ಪೊಲೀಸ ಇಲಾಖೆಯವರು ಸನವಳ್ಳಿ ಗ್ರಾಮದ ಒತ್ತುವರಿ ಜಮೀನನ್ನು ಖುಲ್ಲಾಪಡಿಸಲು ಮುಂದಾಗದೆ ಮೃದುದೋರಣೆ ತೋರುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ಒಂದು ವಾರದೊಳಗಾಗಿ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಜುಲೈ 26 ರಿಂದ ಮುಂಡಗೋಡ ತಹಸೀಲ್ದಾರ ಕಾರ್ಯಲಯದ ಎದುರು ಅನಿರ್ದಿಷ್ಟ ಕಾಲದವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಸುರೇಶ ಕೆರೆಹೊಲ್ದವರ, ಸಂಪತಕುಮಾರ ಕ್ಯಾಮನಕೇರಿ, ಪ್ರಭು ಅರಶೀಣಗೇರಿ, ಮಹಾದೇವಪ್ಪ ಕ್ಯಾಮನಕೇರಿ, ಭಾಷಾಸಾಬ ಸಿದ್ದಿ, ತಿರಕಪ್ಪ ಸುಣಗಾರ, ದಿನೇಶ ಕೆರಿಹೊಲ್ದವರ, ಪಕ್ಕೀರ್ಪ ಮನ್ನಂಗಿ, ಈರಕ್ಕ ಮಟ್ಟಿಮನಿ, ಶೋಭಾ ಹಿರೇಮಠ, ಬೀಬಿಜಾನ ಮಸ್ತಾನ, ಸುವರ್ಣ ಹನಕನಳ್ಳಿ ಮುಂತಾದವರು ಉಪಸ್ಥಿತರಿದ್ದರು.