ಬಳ್ಳಾರಿ

ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ

ಬಳ್ಳಾರಿ, ಫೆ.25: ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ವಿರೋಧಿಸಿ ಇಂದ ಬೆಳಿಗ್ಗೆ ನಗರದ ನಗರೂರು ನಾರಾಯಣರಾವ್ ಉದ್ಯಾನವನದಿಂದ ಮೆರವಣಿಗೆಯ ಮೂಲಕ ರಾಯಲ್ ವೃತ್ತಕ್ಕೆ ತೆರಳಿ ಅಲ್ಲಿ ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು. ಕೇಂದ್ರ ಸರ್ಕಾರ ನಿರಂತರ ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತು ಸಾರಿಗೆ ಸರಕು ಸಾಗಾಣಿಕೆ ಎಲ್ಲಾ ರಂಗದಲ್ಲೂ ಸಾಮಾನ್ಯ ಜನಗಳಿಗೆ ಬದುಕು ದುಸ್ತರವಾಗುವ ಮಟ್ಟ ತಲುಪಿದೆ. ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದಾಗಲೂ ಇದರ ಲಾಭವನ್ನು ಸಾಮಾನ್ಯ ಜನರಿಗೆ ದೊರಕಿಸಿಲ್ಲ, ಆದರೆ ಮೇಲಿಂದ ಮೇಲೆ ಗ್ಯಾಸ್ ಮತ್ತು ಪೆಟ್ರೋಲ್, ಡೀಸೆಲ್ ಇವುಗಳ ಮೇಲೆ ವಿಶೇಷ ತೆರಿಗೆ ಹೇರುತ್ತಿರುವ ಕಾರಣ ಪೆಟ್ರೋಲ್ ರೂ. 100 ದಾಟುವ ಮಟ್ಟಕ್ಕೆ ಬಂದಿದೆ. 

ಹಿಂದಿನ ಯುಪಿಎ ಸರಕಾರದ ವಿರುದ್ಧ ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮುಖಂಡರು ಇಂದು ಯಾವುದೇ ಪ್ರತಿಕ್ರಿಯೆ ನೀಡಲಾರದೇ ಮೌನ ತಾಳಿರುವುದು ಕಂಡು ಬರುತ್ತಿದೆ. ಜನಗಳಿಗೆ ಮೇಲಿಂದ ಮೇಲೆ ತೊಂದರೆ, ಬದುಕು ದುಸ್ತರವಾಗುವ ಈ ಒಂದು ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕೂಡಲೇ ತುರ್ತು ಕ್ರಮ ತೆಗೆದುಕೊಂಡು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಮುಂದಾಗಬೇಕು, ಅದೇರೀತಿ ಅಡುಗೆ ಗ್ಯಾಸ್‍ಗೆ ಸಬ್ಸಿಡಿಯನ್ನು ರದ್ದುಗೊಳಿಸುವ ಕ್ರಮ ಸಹ ಸಾಮಾನ್ಯ ಜನರಿಗೆ ಬಹಳಷ್ಟು ಆತಂಕ ತಂದಿದೆ. ಆದ್ದರಿಂದ ಗ್ಯಾಸ್ ಸಬ್ಸಿಡಿ ಪುನಸ್ಥಾಪಿಸಲು ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗೆ ಜನಾಂದೋಲನಕ್ಕೆ ಮುಂದಾಗುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ.ಇಸ್ಮಾಯಿಲ್, ಎಐವೈಎಫ್ ಆಧ್ಯಕ್ಷರಾದ ಕಟ್ಟೇಬಸಪ್ಪ, ಅಂಗನವಾಡಿ ಸಂಘದ ಅಧ್ಯಕ್ಷರಾದ ಈ.ಮಂಗಮ್ಮ, ಅಗ್ರಿಗೋಲ್ಡ್ ಠೇವಣಿದಾರರ ಮುಖ್ಯಸ್ಥರಾದ ಗುರುಮೂರ್ತಿ, ಹಲಕುಂದಿ ವೀರೇಶ್, ವಿಶ್ವನಾಥಸ್ವಾಮಿ, ಹನುಮಂತ, ಮುಕ್ಕಣ್ಣ, ಮುದುಕಪ್ಪ, ಕಲ್ಯಾಣಗೌಡ, ಕೊಳಗಲ್ಲು ವೀರಣ್ಣ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ