ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಬಳ್ಳಾರಿ 18: ಇಂದು ನಗರದ ತಾಲ್ಲೂಕು ಕಛೇರಿಯ ಎದುರು ಎಸ್ಯಸಿಐ (ಕಮ್ಯುನಿಸ್ಟ್) ಪಕ್ಷದ ವಿಜಯನಗರ ಘಟಕದಿಂದ ಬೆಲೆ ಏರಿಕೆ ಮುಂತಾದ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಎಸ್.ಯು.ಸಿ.ಐ(ಸಿ) ಮುಖಂಡ ಡಾ. ಪ್ರಮೋದ್ ಮಾತನಾಡುತ್ತಾ ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳಿಂದ, ಇಂದು ದೇಶದ ಜನ ಸಾಮಾನ್ಯರ ಜೀವನ ದಿನದಿನಕ್ಕೆ ಸಂಕಷ್ಟಮಯವಾಗುತ್ತಿದೆ. ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ, ಜನರ ನೆಮ್ಮದಿಯನ್ನು ಕಿತ್ತುಕೊಂಡಿದೆ. ಕೇಂದ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಳೆದ 3 ತಿಂಗಳಲ್ಲಿ ರೂ.225ರಷ್ಟು ಏರಿಸಿದ್ದರೆ, ಪೆಟ್ರೋಲ್ ಬೆಲೆ ರೂ.100ದತ್ತ ಮುನ್ನುಗ್ಗುತ್ತಿದೆ. ಅಡುಗೆÉ ಎಣ್ಣೆಯ ಬೆಲೆ ರೂ.150 ಆಸುಪಾಸಿನಲ್ಲಿದೆ. ಬೇಳೆ ಕಾಳುಗಳು, ತರಕಾರಿ ಹೀಗೆ ಎಲ್ಲದರ ಬೆಲೆಗಳು ಗಗನಕ್ಕೇರುತ್ತಿವೆ. ಎಷ್ಟೆ ದುಡಿದರೂ, ಮನೆಯವರಿಗೆ ಒಂದೊಪ್ಪತ್ತಿನ ಊಟ ಹೊಂದಿಸುವುದು ಸಹ ದುಸ್ತರವಾಗಿದೆ. ಮತ್ತೊಂದೆಡೆ ರೇಷನ್ ಮೂಲಕ ನೀಡಲಾಗುತ್ತಿದ್ದ ಬೇಳೆ ಕಾಳುಗಳನ್ನು ನಿಲ್ಲಿಸಲಾಗುತ್ತಿದೆ. ಅವುಗಳ ಪ್ರಮಾಣವನ್ನು ಸಹ ಕಡಿತಗೊಳಿಸಲಾಗಿದೆ. ಈ ಹಿಂದೆ ನೀಡಲಾಗುತ್ತಿದ್ದ ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಈಗಾಗಲೆ ನಿಲ್ಲಿಸಲಾಗಿದೆ. 7 ಕೆ.ಜಿಯಷ್ಟು ನೀಡಲಾಗುತ್ತಿದ್ದ ಅಕ್ಕಿಯನ್ನು 5 ಕೆ.ಜಿಗೆ ಇಳಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಪಾಪತಿ ಅವರು ಗಣಿಬಾಧಿತ ಪ್ರದೇಶಗಳಿಗೆ ಡಿಎಂಎಫ್, ಆರ್.ಆರ್ ಫಂಡ್ ಹೆಸರಲ್ಲಿ ಸಾಕಷ್ಟು ಹಣವಿದ್ದರೂ, ಜನರ ಸೌಲಭ್ಯಗಳನ್ನು ಉತ್ತಮಪಡಿಸುವ ಹಾಗೂ ಅವರಿಗೆ ಬದುಕು ಕಟ್ಟಿಕೊಡುವ ಮತ್ತು ಕೃಷಿಯನ್ನು ಪುನಶ್ಚೆತನಗೊಳಿಸುವ ನಿಟ್ಟಿನಲ್ಲಿ ಬಳಕೆಯಾಗುತ್ತಿಲ್ಲ. ವಿಕಲಚೇತನ, ವಿಧವೆಯರು, ವೃದ್ಧರಿಗೆ ನೀಡುವ ಮಾಸಿಕ ಪಿಂಚಣಿ ಅತ್ಯಂತ ಕಡಿಮೆಯಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ಎಸ್.ಯು.ಸಿ.ಐ ಹೊಸಪೇಟೆಯಲ್ಲಿ (ವಿಜಯನಗರ) ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 19ರಂದು ರಾಜ್ಯ ಮಟ್ಟದ ಹೋರಾಟ ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ. ಈ ಎಲ್ಲಾ ಹೋರಾಟಗಳನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಎಸ್.ಯು.ಸಿ.ಐ ಸದಸ್ಯ ಪ್ರಶಾಂತ್ ಬಡಿಗೇರ್, ಯರ್ರಿಸ್ವಾಮಿ, ಹುಲಗಪ್ಪ, ಮಂಜುಳಾ, ನಾಗರಿಕರಾದ -ಪ್ರಕಾಶ್ ನಾಯ್ಕ, ಅಂಜಿನಿ, ಶಿವಮ್ಮ, ಶಾಂತಮ್ಮ, ಗಿರಿಜಮ್ಮ, ನಾಗರತ್ನಮ್ಮ ಮುಂತಾದವರು ಪಾಲ್ಗೊಂಡಿದ್ದರು.