ಬಡವರ ಏಳಿಗೆ ಕಾಂಗ್ರೆಸ್ದಿಂದಲೇ ಸಾಧ್ಯ: ಕಳ್ಳಿಮನಿ
ತಾಳಿಕೋಟಿ: ಕಾಂಗ್ರೆಸ್ ಪಕ್ಷ ಬಡವರ, ದೀನ ದಲಿತರ ಹಿತವನ್ನು ಬಯಸುವ ಪಕ್ಷವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿಯು ಶ್ರೀಮಂತ ವರ್ಗದವರ ಪಕ್ಷವಾಗಿದ್ದು, ಜನವಿರೋಧಿ ನಿಲುವುಗಳಿಂದ ಬಡ ಹಾಗೂ ಮಧ್ಯಮ ವರ್ಗದವರ ಬದುಕು ದುಸ್ತರವನ್ನಾಗಿ ಮಾಡಿದೆ. ಮುಂಬರಲಿರುವ ದಿನಗಳಲ್ಲಿ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸುಜಾತಾ ಕಳ್ಳಿಮನಿ ಹೇಳಿದರು.
ಪಕ್ಷ ಸಂಘಟನೆ ಪ್ರಯುಕ್ತ ದೇವರಹಿಪ್ಪರಗಿ ಮತಕ್ಷೇತ್ರದ ಬ.ಸಾಲವಾಡಗಿ, ಮೈಲೇಶ್ವರ ಹಾಗೂ ಮಸ್ಕನಾಳ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಯುಪಿಯ ಸರಕಾರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಜನರು ನೆಮ್ಮದಿಯಿಂದ ಇದ್ದರು. ಆಹಾರ ವಸ್ತುಗಳ ಬೆಲೆಯನ್ನು ನಿಯಂತ್ರಿಸಿ ಜನಸಾಮಾನ್ಯರು ನಿರಾತಂಕವಾಗಿ ಬದುಕುವುದಕ್ಕೆ ಸಾಧ್ಯವಾಗುವಂತಹ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಬಿಜೆಪಿ ಆಡಳಿತದಲ್ಲಿ ವಿಪರೀತ ಬೆಲೆ ಏರಿಕೆಯಿಂದಾಗಿ ಜನರ ಬದುಕು ನರಕಸದೃಶವಾಗಿದೆ. 2023ರ ಚುನಾವಣೆಯಲ್ಲಿ ಇವರನ್ನು ತಿರಸ್ಕರಿಸುವದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಅಗತ್ಯ ಇದೆ ಎಂದು ಹೇಳಿದರು.
ಈ ಸಮಯದಲ್ಲಿ ಮುಖಂಡರಾದ ಸೋಮನಾಥ ಕಳ್ಳಿಮನಿ, ದೇವಮ್ಮ ಕುರಿ, ಮುತ್ತು, ಗ್ರಾಮದ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.