ಮಹಬೂಬ್ ಸುಭಾನಿ ಉರುಸ್ ಅಂಗವಾಗಿ ಭಾವೈಕ್ಯತೆಯ ಸಂದೇಶ ಸಾರಿದ ಮೆರವಣಿಗೆ
ಶಿಗ್ಲಿ, 06: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮಹಬೂಬ್ ಸುಭಾನಿ ಉರುಸ್ ಪ್ರಯುಕ್ತ ಭಾನುವಾರ ನಡೆದ ಸಂದಲ್ ಮೆರವಣಿಗೆ ಭಾವೈಕ್ಯತೆಯ ಸಂದೇಶ ಸಾರಿತು. ಮಹಬೂಬ್ ಸುಭಾನಿ ಮಸೀದಿಯಿಂದ ಆರಂಭಗೊಂಡ ಸಂದಲ್ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇದೇ ಸಂದರ್ಭದಲ್ಲಿ ಹಿಂದೂ ಸಮುದಾಯದ ಯುವಕರು ಪ್ರತಿಷ್ಠಾಪಿಸಿದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮದ ವಿವಿಧ ಸಮಾಜಗಳ ಬಾಂಧವರು ಭಾಗವಹಿಸಿದ್ದರು. ಹಿಂದೂ-ಮುಸ್ಲಿಂ ಸಮುದಾಯದವರು ಪರಸ್ಪರ ಸೌಹಾರ್ದದಿಂದ ಪಾಲ್ಗೊಂಡು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದರು.
ನಂತರ ಗ್ರಾಮದಲ್ಲಿ ಸಂದಲ್ ಉರುಸ್ ಪ್ರಯುಕ್ತ ಮಹಾಪ್ರಸಾದ ವಿತರಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು. ಉರುಸ್ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.