ಗದಗ

ಸಿಗ್ಲಿ ಗ್ರಾಮದ ರಸ್ತೆ ಅಭಿವೃದ್ಧಿಗೆ ತಹಶೀಲ್ದಾರ್ಗೆ ಮನವಿ

ಸಿಗ್ಲಿ ಗ್ರಾಮದ ರಸ್ತೆ ಅಭಿವೃದ್ಧಿಗೆ ತಹಶೀಲ್ದಾರ್ಗೆ ಮನವಿ


ಲಕ್ಷ್ಮೇಶ್ವರ, 5: ತಾಲ್ಲೂಕಿನ ಸಿಗ್ಲಿ ಗ್ರಾಮದಲ್ಲಿನ ಹದಗೆಟ್ಟಿರುವ ಎಲ್ಲ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.  

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಧನಂಜಯ ಎಂ. ಮಾಲಗಿತ್ತಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಅವರು ಗ್ರಾಮಸ್ಥರ ಅಹವಾಲು ಆಲಿಸಿದರು.  

ಗ್ರಾಮಸ್ಥರ ಸಮಸ್ಯೆಗಳನ್ನು ಪರೀಶೀಲಿಸಿ, ಮುಂದಿನ ದಿನಗಳಲ್ಲಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.  

ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಗ್ರಾಮದ ಪ್ರಮುಖ ಎಲ್ಲ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.  

ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಬೀದಿ ದೀಪ ಸೇರಿದಂತೆ ಗ್ರಾಮದ ಮೂಲಸೌಕರ್ಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.  

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಎಡಿ ಕೃಷ್ಣಪ್ಪ ಧರ್ಮರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಕೊರಕನವರ್, ಗ್ರಾಮ ಹಿರಿಯ ಮುಖಂಡರಾದ ಶಂಕರ ರಾಗಿ, ಸೋಮನ್ಣ ದಾಣಗಲ್, ಆದಯ್ಯ ಹುಲಗೂರು, ಮಂಜುನಾಥ ಸಂಬೋಜಿ, ರಾಜಣ್ಣ ರಜಪೂತ, ಚಂದ್ರು ಪತ್ತಾರ, ಮಾಲತೇಶ ಬೊಮ್ಮನಕಟ್ಟಿ, ಈರಣ್ಣ ಅಳ್ಳಳ್ಳಿ, ರಾಜು ತನಕಂಟಿ, ಆರ್‌.ಎಂ. ಹೊನಕೇರಿ, ಸಂಗಪ್ಪ ಮಾಳಗಿ, ದ್ರಾಕ್ಷಾಯಿಣಿ ಸಾಲಿಮಠ, ಗಿರಿಜಮ್ಮ ಪತ್ತಾರ, ಲಲಿತಾಂಬರ ಹುಲಗೂರು, ನಂದಾ ಹುಲಗೂರು ಸೇರಿದಂತೆ ಗ್ರಾಮಸ್ಥರು ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ