ಬೆಳಗಾವಿ

ಗುರುವಿನ ಮಾರ್ಗದರ್ಶನ, ಶಿಷ್ಯನ ಶ್ರದ್ಧೆಯೇ ಸಾಧನೆಯ ಮೆಟ್ಟಿಲು

ಗುರುವಿನ ಮಾರ್ಗದರ್ಶನ, ಶಿಷ್ಯನ ಶ್ರದ್ಧೆಯೇ ಸಾಧನೆಯ ಮೆಟ್ಟಿಲು

ಲೋಕದರ್ಶನ ವರದಿ 

ಬೆಳಗಾವಿ 06 : ಗುರುವಿನ ಕೃಪೆ ಮತ್ತು ಮಾರ್ಗದರ್ಶನ ಇದ್ದರೆ ಸಾಮಾನ್ಯ ವ್ಯಕ್ತಿಯೂ ಅಸಾಧಾರಣ ಸಾಧನೆ ಮಾಡಲು ಸಾಧ್ಯ. ಗುರು ಬದುಕುವ ದಾರಿಯನ್ನು, ಸಂಸ್ಕಾರವನ್ನು ಮತ್ತು ಸನ್ಮಾರ್ಗವನ್ನು ತೋರುವ ಮಹಾನ್ ಚೇತನ.

ಗುರುವಿನ ಕೃಪೆಯ ಜೊತೆಗೆ ಶಿಷ್ಯನಲ್ಲಿ ಶ್ರದ್ಧೆ, ವಿನಯ ಮತ್ತು ಕಠಿಣ ಪರಿಶ್ರಮ ಇದ್ದಾಗ ಯಾವುದೇ ವ್ಯಕ್ತಿ ಮಹಾಪುರುಷನಾಗಬಲ್ಲ ಎಂದು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಕಾರಂಜಿ ಮಠದಲ್ಲಿ 304ನೆಯ ಮಾಸಿಕ ಶಿವಾನುಭವ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತಿ ಮಹೋತ್ಸವದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹುಕ್ಕೇರಿ ವಿರಕ್ತ ಮಠದ  ಶಿವಬಸವ ಮಹಾಸ್ವಾಮಿಗಳು  ಹಾನಗಲ್ ಕುಮಾರ ಶಿವಯೋಗಿಗಳ ಜೀವನ, ಸಾಧನೆ, ಸಮಾಜಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯವಾದುದು. ಕಡುಬಡತನದಲ್ಲಿ ಹುಟ್ಟಿ ಬೆಳೆದು ಶ್ರಮಪಟ್ಟು ಜ್ಞಾನಗಳಿಸಿದ ಶಿವಯೋಗಿಗಳು, ಸಮಾಜದ ಜನರನ್ನು ಸಂಸ್ಕಾರವಂತರನ್ನಾಗಿಸಲು ಸ್ವಾಮಿಗಳಿಗೆ ತರಬೇತಿ ನೀಡುವ ಶಿವಯೋಗ ಮಂದಿರ ಪ್ರಾರಂಭಿಸಿದರು. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರಿಂದ ವಚನ ಸಾಹಿತ್ಯವನ್ನು ಪರಿಷ್ಕರಿಸುವಂತೆ ಪ್ರೇರಣೆ ನೀಡಿದರು.  

ಹುಟ್ಟು ಕುರುಡರಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಸಂಗೀತಜ್ಞಾನ ಕಲಿಸಿ ಈ ನಾಡಿನ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಸೇವೆ ಮಾಡಲು ಪ್ರೇರೇಪಿಸಿದರು ಎಂದು ಅವರು ಶಿವಯೋಗಿಗಳ ಸಾಧನೆ ಸ್ಮರಿಸಿದರು.  ವಿಶ್ರಾಂತ ಪ್ರಾಚಾರ್ಯ ಡಾ. ಎಂ.ಎಸ್‌. ಇಂಚಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  


ಸುದ್ದಿ ಓದಿ