ಶಿಕ್ಷಣ, ಸಮಾಜಸೇವೆಯಲ್ಲಿ ಸಾಧನೆ: ಸುಶೀಲಾ ಗುರುವರಿಗೆ ಪ್ರಶಸ್ತಿ
ಲೋಕದರ್ಶನ ವರದಿ
ಬೆಳಗಾವಿ 06 : ಶಿಕ್ಷಕಿಯಾಗಿ ಕ್ರಿಯಾತ್ಮಕ ಬೋಧನೆ, ಶಾಲಾ ಅಭಿವೃದ್ಧಿ, ಸಮಾಜ ಸೇವೆ ಹಾಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬೆಳಗಾವಿ ಮಲಪ್ರಭಾ ನಗರದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಶೀಲಾ ಲಕ್ಷ್ಮೀಕಾಂತ ಗುರವ ಅವರ ಕಾರ್ಯ ಮಾದರಿಯಾಗಿದೆ.
ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಸುಶೀಲಾ ಗುರವ ಅವರು ಕಲಬುರಗಿ ಜಿಲ್ಲೆಯಲ್ಲಿ 1968ರಲ್ಲಿ ಜನಸಿದ್ದು, ತಂದೆ ಮಹಾದೇವಪ್ಪ ಹೂಗಾರ (ನಿವೃತ್ತ ಶಿಕ್ಷಕರು), ತಾಯಿ ಯಮುನಾಬಾಯಿ (ಗೃಹಿಣಿ)ಯಾಗಿದ್ದಾರೆ. ಪತಿ ಲಕ್ಷ್ಮೀಕಾಂತ ಗುರವ ಹಿರಿಯ ನ್ಯಾಯವಾದಿಯಾಗಿದ್ದು, ಇವರಿಗೆ ಒಬ್ಬಳು ಮಗಳು, ಇಬ್ಬರು ಗಂಡು ಮಕ್ಕಳಿದ್ದಾರೆ.
ಶಾಲಾ ಆಸ್ತಿ ರಕ್ಷಣೆಗೆ ಆದ್ಯತೆ ಹಾಗೂ ಮಾದರಿ ಬೋಧನೆಯಲ್ಲಿ ಮುಂಚೂಣಿಯಲ್ಲಿರುವ ಇವರು, ಪ್ರತಿ ವರ್ಷ ಒಂದು ತಿಂಗಳ ವೇತನವನ್ನು ಶಾಲಾ ಮಕ್ಕಳ ಅಗತ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ. ಜತೆಗರ ಗ್ರಾಮೀಣ ಅನಾಥ ಹೆಣ್ಣುಮಗಳನ್ನು ದತ್ತು ಪಡೆದು ಉನ್ನತ ಶಿಕ್ಷಣದವರೆಗೆ ಕಲಿಸಿ ತಾಯಿ ಪ್ರೀತಿ ತೋರಿರುವುದು ಅವರ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಇವರ ಈ ಕಾರ್ಯಕ್ಕೆ ಜಿಲ್ಲಾ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಶಿಕ್ಷಣ ಮಾಣಿಕ್ಯ, ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ, ಸಿರಿಗನ್ನಡ ರತ್ನ, ಗಡಿನಾಡ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ, ಕರ್ನಾಟಕ ಶಿರೋಮಣಿ, ಶಿಕ್ಷಣ ಸಾರಥಿ ರಾಜ್ಯ ಪ್ರಶಸ್ತಿ ಸೇರಿದಂತೆ 24 ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.