ಪೌರಕಾರ್ಮಿಕರ ಆರೋಗ್ಯ-ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಮೇಯರ್ ಮಡಿವಾಳಪ್ಪ ಕರಡಿ
ಲೋಕದರ್ಶನ ವರದಿ
ವಿಜಯಪುರ 23: ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಪೌರಕಾರ್ಮಿಕರು ನಗರದ ಬೆನ್ನೆಲುಬಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ ಹೇಳಿದರು. ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಡುವಲ್ಲಿ ಪೌರಕಾರ್ಮಿಕರ ಪರಿಶ್ರಮ ಅಪಾರ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದು, ಅವರ ಸೇವೆಯನ್ನು ಸಮಾಜ ಸದಾ ಗೌರವಿಸಬೇಕು ಎಂದರು. ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಹಾನಗರ ಪಾಲಿಕೆ ಬದ್ಧವಾಗಿದೆ. ಸಕಾಲದಲ್ಲಿ ವೇತನ ಪಾವತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ದೊರೆಯುವ ಯೋಜನೆಗಳ ಪ್ರಯೋಜನವನ್ನು ಪೌರಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷಕಾಳಜಿ ವಹಿಸಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಮವಸ್ತ್ರ, ಮಾಸ್ಕ್ ಹಾಗೂ ಅಗತ್ಯ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು. ಇತರರ ಆರೋಗ್ಯ ಹಾಗೂ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರು ಮೊದಲು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಮೇಯರ್ ಹೇಳಿದರು.