ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ: ಸಂಗಮೇಶ್ವರ ಮಹಾಸ್ವಾಮಿ
ದೇವರಹಿಪ್ಪರಗಿ 25 : ಗಣೇಶೋತ್ಸವದಲ್ಲಿ ಪಿಒಪಿ ಮೂರ್ತಿಗಳ ಬಳಕೆಯನ್ನು ನಿರ್ಬಂಧಿಸಿ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಉತ್ನಾಳ ಹಿರೇಮಠದ ಸಂಗಮೇಶ್ವರ ಮಹಾಸ್ವಾಮಿಗಳು ಹೇಳಿದರು. ಯಾಳವಾರ ಗ್ರಾಮದ ಗ್ರಾ.ಪಂ. ಆವರಣದಲ್ಲಿ ದೃಶ್ಯಬಿಂಬ ಕಲಾ ಪ್ರತಿಷ್ಠಾನ, ವಿಜಯಪುರ ಹಾಗೂ ಬಸವ ಹಸಿರು ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಅಮೃತ ಹಸ್ತದ ಮಣ್ಣಿನ ಗಣೇಶ ಪರಿಸರ ಸ್ನೇಹಿ ಗಣಪತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಸುಮಾರು 125 ಗ್ರಾಮಗಳ ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು. ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಗಣೇಶ ಮಂಡಳಿಗಳು ಹಾಗೂ ಮೂರ್ತಿ ತಯಾರಕರು ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.