ಹಗರಿಬೊಮ್ಮನಹಳ್ಳಿ

ಚರಂಡಿ ಸ್ವಚ್ಛತೆಗೆ ಆದ್ಯತೆ :ಇಕೋ ಪಾರ್ಕ್‌ ಶೀಘ್ರ ಪೂರ್ಣ

ಚರಂಡಿ ಸ್ವಚ್ಛತೆಗೆ ಆದ್ಯತೆ :ಇಕೋ ಪಾರ್ಕ್‌ ಶೀಘ್ರ ಪೂರ್ಣ

ಹಗರಿಬೊಮ್ಮನಹಳ್ಳಿ 23: ತಾಲೂಕಿನ ತಂಬ್ರಹಳ್ಳಿ ಗ್ರಾಮದ 1ನೇ ವಾರ್ಡ್‌ನಲ್ಲಿ ಚರಂಡಿಗಳು ಅಲ್ಲಲ್ಲಿ ಸ್ಥಗಿತಗೊಂಡಿರುವುದನ್ನು ಗ್ರಾ.ಪಂ.ಉಪಾಧ್ಯಕ್ಷ ಮೈಲಾರ ಶಿವಕುಮಾರ ಗಮನಿಸಿ ಕೂಲಿ ಕಾರ್ಮಿಕರ ಮೂಲಕ ಸ್ವಚ್ಚಗೊಳಿಸಿ ಚರಂಡಿ ನೀರು ಸರಾಗವಾಗಿ ಹೋಗುವಂತೆ ಮಾಡಿದರು. 

ನಂತರ ಮಾತನಾಡಿದ ಅವರು, ಗ್ರಾಮದ ಸಂತೆ ಮಾರುಕಟ್ಟೆಯಲ್ಲಿನ ಹಳೆ ಚರಂಡಿಗಳು ಅಲ್ಲಲ್ಲಿ ಕುಸಿತ ಕಂಡಿದ್ದು, ಈ ಬಾರಿ ನರೇಗಾ ಯೋಜನೆಯಡಿ ಸುಸಜ್ಜಿತ ಚರಂಡಿಗಳನ್ನು ನಿರ್ಮಿಸಲಾಗುವುದು. ವಾರ್ಡ್‌ನ ಮುಖ್ಯಚರಂಡಿಯನ್ನು ಇನ್ನಷ್ಟು ಅಗಲೀಕರಣ ಮಾಡಿ ನೀರು ಓಡುವಂತೆ ಮಾಡಲಾಗುವುದು. ಮೂರನೇ ವಾರ್ಡ್‌ನ ಕೆಲ ಚರಂಡಿಗಳನ್ನು ಅವೈಜ್ಞಾನಿಕವಾಗಿ ಮಾಡಲಾಗಿದ್ದು ಚರಂಡಿ ನೀರು ಸ್ಥಗಿಗೊಳ್ಳದಂತೆ ಬೇರೆ ಮಾರ್ಗದ ಮೂಲಕ ಕಳುಹಿಸಲು ಕ್ರಮವಹಿಸಲಾಗುವುದು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಇಕೋಪಾರ್ಕ್‌ನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಎರಡನೇ ವಾರ್ಡ್‌ನಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದರುವ ರಸ್ತೆ ಕಾಮಗಾರಿಯನ್ನು ಮಾಡಲು ಶಾಸಕ ಭೀಮನಾಯ್ಕರು ಅನುದಾನ ಒದಗಿಸಿದ್ದು ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. 

ಜನ ಮೆಚ್ಚುಗೆ :ಚರಂಡಿ ನೀರು ಸರಾಗವಾಗಿ ಹರಿಯಲಿ, ಯಾರ ಮನೆಗಳಿಗೆ ನುಗ್ಗುವುದು ಬೇಡ ಎಂಬುವ ಉದ್ದೇಶದಿಂದ ಗ್ರಾ.ಪಂ.ಉಪಾಧ್ಯಕ್ಷ ಮೈಲಾರ ಶಿವಕುಮಾರ ಮಳೆ ಸುರಿಯುತ್ತಿದ್ದರು ಛತ್ರಿ ಹಿಡಿದುಕೊಂಡು ಕೂಲಿ ಕಾರ್ಮಿಕರ ಮೂಲಕ ಕೆಲಸ ಮಾಡಿಸುತ್ತಿರುವುದಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. 


ಸುದ್ದಿ ಓದಿ