ಲೇಖನಗಳು

ಕಿತ್ತೂರು ಕರ್ನಾಟಕದ ಪತ್ರಿಕಾರಂಗ : ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳ ಪತ್ರಿಕಾರಂಗದ ಸಂಕ್ಷಿಪ್ತ ನೋಟ

ಕಿತ್ತೂರು ಕರ್ನಾಟಕದ ಪತ್ರಿಕಾರಂಗ  : ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳ ಪತ್ರಿಕಾರಂಗದ ಸಂಕ್ಷಿಪ್ತ ನೋಟ

ಕನ್ನಡ ಪತ್ರಿಕಾರಂಗ ಕಣ್ತೆರೆದು 180 ವರ್ಷಗಳಾಗಿವೆ. 1843ರಲ್ಲಿ ಪ್ರಾರಂಭವಾದ  "ಮಂಗಳೂರು ಸಮಾಚಾರ"  ಮೊದಲ ದಿನಪತ್ರಿಕೆಯಿಂದ ಇಲ್ಲಿಯತನಕದ ಅವಧಿಯಲ್ಲಿ ಕನ್ನಡ ಪತ್ರಿಕೋದ್ಯಮ ಹಂತಹಂತವಾಗಿ ಬೆಳವಣಿಗೆ ಕಾಣುತ್ತ ಇಂದು ಅತ್ಯಾಧುನಿಕ ತಾಂತ್ರಿಕ ಸೌಕರ್ಯಗಳನ್ನು ಪಡೆದಿದೆಯಲ್ಲದೆ ಪ್ರಸಾರ ಸಂಖ್ಯೆಯನ್ನೂ ಸಾಕಷ್ಟು ಹೆಚ್ಚಿಸಿಕೊಂಡಿದೆ. ಇಲೆಕ್ಟ್ರಾನಿಕ್ ಮೀಡಿಯಾದೊಂದಿಗೆ ಇಂದಿನ ಮಾಧ್ಯಮ ಕ್ಷೇತ್ರ ತನ್ನ ವ್ಯಾಪ್ತಿ ವಿಸ್ತಾರವನ್ನು ಅಗಾಧ ಪ್ರಮಾಣದಲ್ಲಿ ಬೆಳೆಸಿಕೊಂಡಿದ್ದು , ವರ್ಣ ಮುದ್ರಣ, ವಿಶೇಷ ಸ್ಥಾನಿಕ ಪುರವಣಿಗಳು ಮತ್ತು ಆವೃತ್ತಿಗಳು, ಇ ಪೇಪರ್ ಮೊದಲಾದವುಗಳ ಮೂಲಕ ಓದುಗರನ್ನು ಹಲವು ಬಗೆಯಲ್ಲಿ ಆಕರ್ಷಿಸಲು ಪ್ರಯತ್ನಿಸುತ್ತಿವೆ. ಒಂದೆಡೆ ಟಿವಿ ಸುದ್ದಿ ಚಾನೆಲ್‌ಗಳು, ಇನ್ನೊಂದೆಡೆ ಪತ್ರಿಕೆಗಳು ಪೈಪೋಟಿಯ ಮೇಲೆ ತಮ್ಮ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳತೊಡಗಿರುವುದರಿಂದ ಇಂದು ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿಯೂ ಪ್ರತಿಯೊಂದು ಪತ್ರಿಕೆ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಮುಂದಾಗಿದೆ. ಕನ್ನಡ ಭಾಷಾ ಪತ್ರಿಕೆಗಳೊಡನೆ ಇಂಗ್ಲಿಷ್, ಉರ್ದು, ಹಿಂದಿ, ಮರಾಠಿ, ಕೊಂಕಣಿ  ಅಲ್ಲದೆ ಕೆಲ ಪ್ರಾದೇಶಿಕ ಭಾಷಾ ಪತ್ರಿಕೆಗಳೂ ಹೊರಬರುತ್ತಿವೆ. ಪ್ರತಿ ವರ್ಷ ಹೊಸ ಹೊಸ ಪತ್ರಿಕೆಗಳು ಹುಟ್ಟಿಕೊಳ್ಳುತ್ತಿದ್ದರೂ ಹೆಚ್ಚಿನ ಪತ್ರಿಕೆಗಳು ಅಲ್ಪಕಾಲ ಬದುಕಿ ಮಾಯವಾಗುತ್ತಿದ್ದು ದೊಡ್ಡ ಬಂಡವಾಳು ಹೂಡಿದ ಕೆಲವು ದಿನಪತ್ರಿಕೆಗಳು ಮಾತ್ರ ರಾಜ್ಯವ್ಯಾಪಿ ಪ್ರಸಾರ ಹೊಂದಿರುವುದನ್ನೂ ನಾವು ಕಾಣಬಹುದಾಗಿದೆ.   

ಕಿತ್ತೂರು ಕರ್ನಾಟಕ  

ಬ್ರಿಟಿಷರ ಕಾಲದಿಂದಲೂ "ಮುಂಬಯಿ  ಕರ್ನಾಟಕ" ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ಏಳು ಜಿಲ್ಲೆಗಳನ್ನೊಳಗೊಂಡ ಭಾಗವನ್ನು ರಾಜ್ಯ ಸರಕಾರ 2021ರ ನವೆಂಬರ ತಿಂಗಳಲ್ಲಿ "ಕಿತ್ತೂರು ಕರ್ನಾಟಕ" ಎಂದು ಘೋಷಿಸಿತು. ಇದರಿಂದ ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟ, ವಿಜಯಪುರ, ಉತ್ತರ ಕನ್ನಡ, ಗದಗ ಈ ಏಳು ಜಿಲ್ಲೆಗಳು ಕಿತ್ತೂರು ಕರ್ನಾಟಕದ ಪರಿಧಿಗೆ ಬರುವಂತಾದವು.(ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 2019ರಲ್ಲೇ  "ಕಲ್ಯಾಣ  ಕರ್ನಾಟಕ" ಎಂದು ಹೆಸರಿಸಲಾಗಿದೆ).  1824ರಲ್ಲೇ ಬ್ರಿಷರೊಡನೆ ಹೋರಾಟ ಮಾಡಿದ ವೀರ ಮಹಿಳೆ ಕಿತ್ತೂರು ಚೆನ್ನಮ್ಮ ಆಳಿದ  ಕಿತ್ತೂರು ಸಂಸ್ಥಾನವನ್ನು ಒಳಗೊಂಡ ಖ್ಯಾತಿಗಾಗಿ ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುವ  ಈ ಪ್ರದೇಶ "ಕಿತ್ತೂರು ಕರ್ನಾಟಕ" ಎಂಬ ಹೆಸರು ಪಡೆದುಕೊಂಡಿತು.   

ಬೆಳಗಾವಿ ಜಿಲ್ಲೆ  

ಹದಿಮೂರು ತಾಲೂಕುಗಳನ್ನೊಳಗೊಂಡ ಬೃಹತ್ ಜಿಲ್ಲೆ ಬೆಳಗಾವಿ ಪತ್ರಿಕಾ ಕ್ಷೇತ್ರದಲ್ಲಿಯೂ  ಹಲವು ಮಹತ್ವದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಕನ್ನಡದ ಮೊದಲ ಪತ್ರಿಕೆ ಜನಿಸಿದ ಆರು ವರ್ಷಗಳ ನಂತರ 1849ರಲ್ಲಿ ಬೆಳಗಾವಿಯಲ್ಲಿ" ಸುಬುದ್ಧಿ ಪ್ರಕಾಶ" ಎಂಬ ವಾರಪತ್ರಿಕೆ ಹೊರಬಂತು. ಇದು ಕನ್ನಡದ ಮೊದಲ ವಾರಪತ್ರಿಕೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಪತ್ರಿಕೆ ಸುಮಾರು ಏಳು ವರ್ಷಗಳಕಾಲ ನಡೆದ ದಾಖಲೆಯಿದ್ದು ಸಾವಿರಕ್ಕೂ ಹೆಚ್ವು ಪ್ರಸಾರ ಹೊಂದಿತ್ತು. ಆದರೆ ಈ ಪತ್ರಿಕೆಯ ಸಂಪಾದಕರು ಬೀರು ಶೇಷು ಎಂಬ ಮರಾಠಿ ಮೂಲದವರೆಂಬುದೂ ಗಮನಾರ್ಹ.   

ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿದ ಎರಡು ಪತ್ರಿಕೆಗಳು ಶತಮಾನೋತ್ತರ ಐವತ್ತು ವರ್ಷಗಳನ್ನು ಕಂಡು ಇಂದಿಗೂ ಪ್ರಕಟನೆ ಕಾಣುತ್ತಿರುವುದು ಉಲ್ಲೇಖನೀಯ. ಒಂದು 1863ರಲ್ಲಿ ಆರಂಭವಾದ "ಬೆಳಗಾಂವ್ ಸಮಾಚಾರ" ಎಂಬ ಮರಾಠಿ ವಾರಪತ್ರಿಕೆ ಮತ್ತು ಇನ್ನೊಂದು 1865ರಲ್ಲಿ ಹುಟ್ಟಿಬಂದ "ಮಠ ಪತ್ರಿಕೆ" ಈಗಲೂ "ಜೀವನ ಶಿಕ್ಷಣ" ಎಂಬ ಹೆಸರಿನ ಮಾಸಪತ್ರಿಕೆಯಾಗಿ ಧಾರವಾಡದಲ್ಲಿ ಬೆಳಕು ಕಾಣುತ್ತಿದೆ.   

ಇನ್ನು ಉತ್ತರ ಕರ್ನಾಟಕ ಭಾಗದ ಅತ್ಯಂತ ಜನಪ್ರಿಯ ದಿನಪತ್ರಿಕೆ "ಸಂಯುಕ್ತ ಕರ್ನಾಟಕ" ಹುಟ್ಟಿ ಬಂದಿದ್ದು ಬೆಳಗಾವಿಯಲ್ಲಿ. ಈಗ  90ನೆಯ ವರ್ಷದಲ್ಲಿ ಹುಬ್ಬಳ್ಳಿಯಿಂದ ಮುನ್ನಡೆದಿರುವ ಈ ಪತ್ರಿಕೆ 1929 ರಿಂದ ವಾರಪತ್ರಿಕೆಯಾಗಿ, ನಂತರ 1933 ರಿಂದ ದಿನಪತ್ರಿಕೆಯಾಗಿ 1937ರಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಲ್ಪಟ್ಟಿತು. ಅದರಂತೆಯೇ ಸಂದೇಶ ದ್ವಿವಾರ ಪತ್ರಿಕೆ, ಜನಜೀವಾಳ ಸಾಪ್ತಾಹಿಕ, ಲೋಕದರ್ಶನ, ನಾಡೋಜ, ಕನ್ನಡಮ್ಮ, ಸಮತೋಲ, ಹಸಿರು ಕ್ರಾಂತಿ, ಸಿರಿನಾಡು, ಕರ್ನಾಟಕ ಟೈಮ್ಸ್‌ ಮೊದಲಾದ ಕನ್ನಡ ದಿನಪತ್ರಿಕೆಗಳು, ದೈನಿಕ ತರುಣ ಭಾರತ, ರಣಝಂಜಾರ, ಬೆಳಗಾಂವ್ ವಾರ್ತಾ ಮೊದಲಾದ ಮರಾಠಿ ದಿನಪತ್ರಿಕೆಗಳು 25 ರಿಂದ 75 ವರ್ಷಗಳ ತನಕದ ಬದುಕು ಕಂಡಿವೆ. ಅಲ್ಲದೆ ಮಹಾರಾಷ್ಟ್ರ ಗಡಿಭಾಗದಲ್ಲಿರುವುದರಿಂದ ಪುಢಾರಿ, ಲೋಕಸತ್ತಾ, ಸಕಾಳ, ಮಹಾರಾಷ್ಟ್ರ ಟೈಮ್ಸ್‌ ಮೊದಲಾದ ಪತ್ರಿಕೆಗಳು ಸಹ ಇಲ್ಲಿ ಸಾಕಷ್ಟು ಮರಾಠಿ ಓದುಗರನ್ನು ಹೊಂದಿವೆ. ಕುಂದಾ ನಗರಿ, ಬೆಳಗಾವಿ ವರದಿ, ಗಡಿ ಕನ್ನಡಿಗ  ಮೊದಲಾದ ಸ್ಥಾನಿಕ ಪತ್ರಿಕೆಗಳು, ಪ್ರಗತಿ ವಾಹಿನಿ ಮೀಡಿಯಾ ಹೌಸ್ ನಂತಹ ಆನಲೈನ್ ಸುದ್ದಿ ವ್ಯವಸ್ಥೆಗಳು, ಹಲವು ದೊಡ್ಡ ದಿನಪತ್ರಿಕೆಗಳ ಇ ಪೇಪರ್,  ಬಾನುಲಿ, ದೂರದರ್ಶನ ಸಹಿತ ವಿವಿಧ ಟಿವಿ ನ್ಯೂಸ್ ಚಾನೆಲ್ ಗಳು, ಯುಎನ್‌ಐ, ಪಿಟಿಐ ಸುದ್ದಿ ಸಂಸ್ಥೆಗಳು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.   

*  

ರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಗಳೆನಿಸಿರುವ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ವಿಶ್ವ ವಾಣಿ, ಹೊಸದಿಗಂತ, ಸಂಜೆವಾಣಿ, ಈ ಸಂಜೆ ಮೊದಲಾದವು, ಡೆಕ್ಕನ್ ಹೆರಾಲ್ಡ್‌, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್‌ ಆಫ್ ಇಂಡಿಯಾ, ದಿ ಹಿಂದು ಮುಂತಾದ ಇಂಗ್ಲಿಷ್ ದಿನಪತ್ರಿಕೆಗಳು ಕಿತ್ತೂರು ಕರ್ನಾಟಕದ ಎಲ್ಲ ಏಳು ಜಿಲ್ಲೆಗಳಲ್ಲೂ ತಮ್ಮದೇ ಓದುಗರ ವಲಯವನ್ನು ಹೊಂದಿವೆ. ಹೆಚ್ಚಿನ ದಿನಪತ್ರಿಕೆಗಳು ಇಂದು ಆಧುನಿಕ ಯುಗಕ್ಕೆ ತಕ್ಕಂತೆ ಇ ಪೇಪರ್ ಹೊರತರುತ್ತಿವೆ. ಸಂಗಡ ಎಲ್ಲ ಕನ್ನಡ ದೈನಿಕಗಳೂ ಸ್ಥಾನಿಕ ಆವೃತ್ತಿಗಳನ್ನು ಹೊಂದಿದ್ದು ಸ್ಥಳೀಯರನ್ನು ಆಕರ್ಷಿಸಲು ವಿವಿಧ ಸ್ಥಾನಿಕ ವಿಶೇಷಗಳ ಪುರವಣಿ ಪುಟಗಳನ್ನು ಹೊರತರುತ್ತಿವೆ. ಸ್ಥಾನಿಕ ಕಾರ್ಯಾಲಯಗಳನ್ನು, ವರದಿಗಾರರನ್ನು ಹೊಂದಿವೆ. ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಇವು ಅನಿವಾರ್ಯ ಕೂಡ. ಬೆಳಗಾವಿ, ಧಾರವಾಡ- ಹುಬ್ಬಳ್ಳಿ, ವಿಜಯಪುರ, ಹಾವೇರಿ, ಬಾಗಲಕೋಟ, ಉತ್ತರಕನ್ನಡ, ಗದಗ ಈ ಎಲ್ಲ  ಜಿಲ್ಲೆಗಳಲ್ಲೂ ಇದು ಸಮಾನವಾಗಿ ಕಾಣುವಂತಹ ಸಂಗತಿ.  

ವಿಜಯಪುರ ಜಿಲ್ಲೆ  

ಕನ್ನಡ ಪತ್ರಿಕೋದ್ಯಮದಲ್ಲಿ  ವಿಜಯಪುರ (ವಿಜಾಪುರ) ಜಿಲ್ಲೆ ತನ್ನದೇ ಆದ ವಿಶಿಷ್ಟ ಮುದ್ರೆ ಒತ್ತಿದೆ. ಉತ್ತರ ಕರ್ನಾಟಕ ಭಾಗದ ಪ್ರತಿಕೋದ್ಯಮದ ತಳಹದಿ ಭದ್ರ ಪಡಿಸುವಲ್ಲಿ ಈ ಜಿಲ್ಲೆಯ ಘಟಾನುಘಟಿ ಪತ್ರಕರ್ತರ ಸಾಧನೆ ಅನನ್ಯವಾದದ್ದು. ಫ.ಗು. ಹಳಕಟ್ಟಿ, ಹರ್ಡೇಕರ ಮಂಜಪ್ಪ, ಮೊಹರೆ ಹಣಮಂತರಾವ್, ವಿ.ಬಿ. ನಾಯಕ,  ಸ.ಚ. ಮಿರ್ಜಿ, ಹ.ರಾ. ಪುರೋಹಿತ, ಮಂಗಳವೇಢೆ ಶ್ರೀನಿವಾಸರಾಯರು ಮೊದಲಾದ ದಿಗ್ಗಜಗಳ ಹೆಸರೇ ಸಾಕು, ಕನ್ನಡ ಪತ್ರಿಕಾರಂಗದ ಘನತೆ ಹೆಚ್ಚಲು. 1869ರಲ್ಲಿ "ಹಿತೇಚ್ಛು" ಎಂಬ ಮರಾಠಿ ಪತ್ರಿಕೆ ಹೊರಬಂದದ್ದು ಆಗಿನ ಕಲಾದಗಿ ಜಿಲ್ಲೆಯಿಂದ. ನಂತರ ಕಲಾದಗಿ ವಿಜಾಪುರ ಜಿಲ್ಲೆಯೆನಿಸಿಕೊಂಡಿತು. 1892ರಲ್ಲಿ ಈ ಜಿಲ್ಲೆಯಿಂದ ಹೊರಬಂದ "ಕರ್ನಾಟಕ ವೈಭವ" ವಾರಪತ್ರಿಕೆ ಬಹಳ ದೊಡ್ಡ ಹೆಸರು ಮಾಡಿತಲ್ಲದೆ ಮೊಹರೆ, ಹಣಮಂತರಾವ್ ಕೌಜಲಗಿಯವರಂತಹ ಪತ್ರಕರ್ತರು ಅದರ ಮೂಲಕ ಪತ್ರಿಕಾರಂಗಕ್ಕೆ ದೊರಕಿದರು. ಮೂರು ದಶಕಗಳ ದೀರ್ಘಕಾಲ ನಡೆದ ಈ ಪತ್ರಿಕೆ ಆಗ ರಾಷ್ಟ್ರೀಯ ವಾರಪತ್ರಿಕೆಯೆನಿಸಿಕೊಂಡಿದ್ದು ವಿಶೇಷ.  

1920ರ ದಶಕದಿಂದ ಪ್ರಕಟಗೊಳ್ಳುವ ಪತ್ರಿಕೆಗಳ ಸಂಖ್ಯೆ ಹೆಚ್ಚಿತು. ಮುಂದಾಳು, ಸುಧಾಕರ, ಪ್ರಜಾಮಿತ್ರ, ಹಳಕಟ್ಟಿಯವರ ನವಕರ್ನಾಟಕ ಮೊದಲಾದವು, ಅವಿಭಜಿತ ಜಿಲ್ಲೆಯ ಅಂಗವಾಗಿದ್ದ ಬಾಗಲಕೋಟೆಯಿಂದಲೂ ಹಲವು ಪತ್ರಿಕೆಗಳು ಹೊರಬಂದವು. 1959ರಲ್ಲಿ ವಾರಪತ್ರಿಕೆಯಾಗಿ ಪ್ರಾರಂಭವಾಗಿ ನಂತರ ದಿನಪತ್ರಿಕೆಯಾದ "ಸಂದರ್ಶನ" ವಿ. ಬಿ. ನಾಯಕರ ಸಂಪಾದಕತ್ವದಲ್ಲಿ ಬಹಳ ಪ್ರಸಿದ್ಧಿ ಪಡೆದ ಪತ್ರಿಕೆ. ಮಿರ್ಜಿಯವರ "ಉದಯ", ಮಂಗಳವೇಢೆಯವರ ನವಜೀವನ, ಕನ್ನಡಿಗ, ಹೊಂಬಾಳಿಯವರ ನಾಗರಿಕ, ಶಾಲಗಾರರ ಸಮಾಜವೀರ, ಮಮದಾಪುರರ ರಾಜಮಾರ್ಗ, ನಾಗಠಾಣರ ವೀರವಾಣಿ, ತುಂಗಳರ ಕುರುಕ್ಷೇತ್ರ, ಗೊಂದಿಯವರ ವಿಕ್ರಾಂತ ಭಾರತ, ಮತ್ತಿತರ ಹಲವು ಪತ್ರಿಕೆಗಳು ವಿಜಯಪುರ ಜಿಲ್ಲೆಯ ಪತ್ರಿಕಾಕ್ಷೇತ್ರದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿವೆ. ಈ ಜಿಲ್ಲೆಯಿಂದ 100-150 ವಾರ/ ಪಾಕ್ಷಿಕ ಪತ್ರಿಕೆಗಳು ಹೊರಬಂದಿದ್ದರೂ ಉಳಿದುಕೊಂಡಿರುವುದು ಕೆಲವೇ ಕೆಲವು. ಮತ್ತೆ ಮತ್ತೆ ಹೊಸ ಪತ್ರಿಕೆಗಳು ಹುಟ್ಟಿಬರುತ್ತಲೇಇವೆ. ಅವುಗಳೊಂದಿಗೆ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯವಾಣಿ, ವಿಜಯ ಕರ್ನಾಟಕ, ಹೊಸದಿಗಂತ, ವಿಶ್ವ ವಾಣಿ, ಅಲ್ಲದೆ ಇಂಗ್ಲಿಷ ದಿನಪತ್ರಿಕೆಗಳು ವಿಜಯಪುರ ಜಿಲ್ಲಾ ಆವೃತ್ತಿಗಳನ್ನು ಹೊರತರುತ್ತಿವೆ .   

ಜಮಖಂಡಿ, ಬನಹಟ್ಟಿ, ರಬಕವಿ, ಬೀಳಗಿ ಮೊದಲಾದೆಡೆಗಳಿಂದಲೂ ಹಲವು ಪತ್ರಿಕೆಗಳು ಬೆಳಕು ಕಂಡಿದ್ದು ಸಾಧಕ, ಶರಣ ವಾಹಿನಿ, ತಾಯಿಜೀವ, ಸಂತವಾಣಿ, ಹುಚ್ಚ, ಜಮಖಂಡಿ ಟೈಮ್ಸ್‌, ಜೈ ಜಮಖಂಡಿ, ವಾರ್ತೆ, ನೀಲಕಂಠ ದಾತಾರರ ಧಡಲ್ ಬಾಜಿ, ಸದಾಚಾರ, ಶಿಕ್ಷಣ ಸಿರಿ, ದ್ವಿಭಾಷಾ ಪತ್ರಿಕೆ ಜುಗ್ನು ಮೊದಲಾದವುಗಳನ್ನಿಲ್ಲಿ ಉಲ್ಲೇಖಿಸಬಹುದು.   

ಬಾಗಲಕೋಟ ಜಿಲ್ಲೆ  

ಹಿಂದೆ ವಿಜಯಪುರ ಜಿಲ್ಲೆಯಲ್ಲಿದ್ದ ಬಾಗಲಕೋಟ ಪ್ರತ್ಯೇಕ ಜಿಲ್ಲೆಯಾಗುವದಕ್ಕಿಂತ ಮೊದಲೇ ಕಲ್ಲಚ್ಚಿನ ಮುದ್ರಣ ಕಾಣುತ್ತಿದ್ದ "ಚಂದ್ರಿಕಾ", ನವೀನ ಭಾರತ, ಮಧುರವಾಣಿ, ಶ್ರೀಕೃಷ್ಣ ಸಂದೇಶ, ಕರ್ನಾಟಕ ಶಿಕ್ಷಣ, ನಾಡನುಡಿ,  ವೀರ​‍್ರಭಾ, ನಾಗರಿಕ, ಸಮಾಜವೀರ ಮೊದಲಾದ ಪತ್ರಿಕೆಗಳು ಅಲ್ಲಿಂದ ಪ್ರಕಟಗೊಳ್ಳುತ್ತಿದ್ದವು. 1928ರಲ್ಲೇ ಬಾಗಲಕೋಟೆಯಲ್ಲಿ ಡಿವಿಜಿ ಯವರ ಅಧ್ಯಕ್ಷತೆಯಲ್ಲಿ ವೃತ್ತಪತ್ರಕರ್ತರ ಸಮ್ಮೇಳನ ನಡೆದಿದ್ದು ಗಮನಾರ್ಹ.   

ಬಾಗಲಕೋಟೆಯ ನವನಿರ್ಮಾಣದ ನಂತರ ಅಲ್ಲಿ ಆಧುನಿಕ ಪತ್ರಿಕಾರಂಗ ವಿಶೇಷ ಬೆಳವಣಿಗೆ ಕಂಡಿದ್ದು ರಾಜ್ಯಮಟ್ಟದ ಎಲ್ಲ ದೊಡ್ಡ ಪತ್ರಿಕೆಗಳು ಅಲ್ಲಿ ನೆಲೆಗೊಂಡಿವೆ. ಸಂಗಡ ಹೊಸ ಪತ್ರಿಕೆಗಳೂ ತಲೆಯೆತ್ತುತ್ತಿವೆ.  

ಧಾರವಾಡ ಜಿಲ್ಲೆ  

ಪುನರ್ವಿಂಗಡನೆಗೂ ಮೊದಲು 17 ತಾಲೂಕುಗಳನ್ನೊಳಗೊಂಡ ಬಹು ದೊಡ್ಡ ಜಿಲ್ಲೆಯೆನಿಸಿದ್ದ ಧಾರವಾಡ 1997ರಲ್ಲಿ ಮೂರು ಜಿಲ್ಲೆಗಳಲ್ಲಿ ವಿಂಗಡನೆಯಾಯಿತು. ಅಷ್ಟರಲ್ಲಾಗಲೇ ಶೈಕ್ಷಣಿಕವಾಗಿ ಮಾದರಿ ಜಿಲ್ಲೆಯೆನಿಸಿದ್ದ ಧಾರವಾಡದಲ್ಲಿ ಪತ್ರಿಕಾರಂಗ ಸಹ ಸತ್ವಯುತವಾಗಿ ಬೆಳೆದುನಿಂತಿತ್ತು. 1850ರ ದಶಕದಲ್ಲಿ ಮೊಳಕೆಯೊಡೆದ ಪತ್ರಿಕಾರಂಗದಲ್ಲಿ  ಆಗಿನ ಮರಾಠೀ ಭಾಷಾ ಪ್ರಭಾವವೂ ಸೇರಿದಂತೆ ಮೊದಲು ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳ ಪತ್ರಿಕೆಗಳು ಕಾಣಿಸಿಕೊಂಡವು. 1861 ರಿಂದ ಬೆಳವಣಿಗೆ ಕಂಡ ಪತ್ರಿಕೊದ್ಯಮದಲ್ಲಿ ಜ್ಞಾನ ಬೋಧಕ, ವಿಚಿತ್ರ ವರ್ತಮಾನ, ಕರ್ನಾಟಕ ವಾರ್ತಿಕ, ಧಾರವಾಡ ವೃತ್ತ, ಶೋಧಕ, ಲೋಕಶಿಕ್ಷಣ, ಚಂದ್ರೋದಯ, ಮೊದಲಾದ ಪತ್ರಿಕೆಗಳು ನಿರ್ಮಿಸಿದ ತಳಹದಿಯ ಮೇಲೆ 1895ರಲ್ಲಿ ಜಿಲ್ಲೆಯ ಮೊದಲ ದೈನಿಕ ವಾಗಿ ಮುದವೀಡು ಕೃಷ್ಣರಾಯರ ಧನಂಜಯ ಪತ್ರಿಕೆ ಹೊರಬಂತು. ಜಠಾರ ಅವರ ರಾಜಹಂಸ ದೈನಿಕವಾಗಿ ಆರಂಭವಾದದ್ದು ಸಾಪ್ತಾಹಿಕವಾಯಿತು. 1876 ರಿಂದ ವಿದ್ಯಾವರ್ಧಕ ಸಂಘದ ಪ್ರಕಟನೆಯಾಗಿ ಆರಂಭವಾದ ವಾಗ್ಭೂಷಣ ಮಾಸಿಕ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದು ಮೂರು ದಶಕಗಳಿಗೂ ಹೆಚ್ಚು ಕಾಲ ಹೊರಬಂತು. ಆಲೂರು ವೆಂಕಟರಾಯರು, ಶಿ. ಶಿ ಬಸವನಾಳ, ಹೊನ್ನಾಪುರಮಠ, ವೆಂಕಟರಂಗೋ ಕಟ್ಟಿ  ಮೊದಲಾದವರು ಈ ಪತ್ರಿಕೆಯ ಬೆಳವಣಿಗೆಗೆ ಶ್ರಮಿಸಿದರು. 1922ರಲ್ಲಿ ಪ್ರಾರಂಭವಾದ ಜಯಕರ್ನಾಟಕ ಮತ್ತು ವಿಜಯ ಪತ್ರಿಕೆಗಳು ತುಂಬ ಜನಪ್ರಿಯತೆ ಗಳಿಸಿಕೊಂಡಿದ್ದವು. ಬೆಳಗಾವಿಯಲ್ಲಿ ಆರಂಭವಾದ ಸಂಯುಕ್ತ ಕರ್ನಾಟಕ 1937ರಲ್ಲಿ ಹುಬ್ಬಳ್ಳಿಗೆ ಬಂದ ನಂತರ ಉತ್ತರ ಕರ್ನಾಟಕ ಪ್ರದೇಶದ ಮಹತ್ವದ ಪತ್ರಿಕೆಯಾಗಿ ಬೆಳೆದು ವ್ಯಾಪಕ ಪ್ರಸಾರವನ್ನೂ ಪಡೆದುಕೊಂಡಿತಲ್ಲದೆ ಲೋಕಶಿಕ್ಷಣ ಟ್ರಸ್ಟಿನ ಕರ್ಮವೀರ ವಾರಪತ್ರಿಕೆ ಮತ್ತು ಕಸ್ತೂರಿ ಮಾಸಿಕಗಳು ಸಹ ಜನಪ್ರಿಯಗೊಂಡವು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲೂ ಇವು ಪ್ರಮುಖ ಪಾತ್ರ ವಹಿಸಿದವು.   

ಹೊನ್ನಾಪುರಮಠ ಕುಟುಂಬದ ಲೋಕಮಿತ್ರ, ಬೆಟಗೇರಿ ಕೃಷ್ಣ ಶರ್ಮರ ಜಯಂತಿ, ಹರ್ಡೀಕರರ ಹುಬ್ಬಳ್ಳಿ ಗೆಜೆಟ್, ಕೆ..ಎಚ್‌. ಪಾಟೀಲರ ವಿಶಾಲ ಕರ್ನಾಟಕ, ಪಾಟೀಲ ಪುಟ್ಟಪ್ಪನವರ ವಿಶ್ವವಾಣಿ, ಪ್ರಪಂಚ, ಇಟಗಿ ವೇದಮೂರ್ತಿಯವರ ನೇತಾಜಿ, ನೆಸ್ವಿಯವರ ನವಯುಗ, ಮೇದಿಯವರ ಕನ್ನಡಿಗ ಮೊದಲಾದ ಪತ್ರಿಕೆಗಳು ಧಾರವಾಡ ಜಿಲ್ಲೆಯ ಪತ್ರಿಕಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿವೆ. ಜೀವನ ಪತ್ರಿಕೆ ಸಹ ಇಲ್ಲಿಯೆ ಜನಿಸಿ ನಂತರ ಬೆಂಗಳೂರಿನಲ್ಲಿ ಮಾಸ್ತಿಯವರ ಸಂಪಾದಕತ್ವದಲ್ಲಿ ಮುಂದುವರಿಯಿತು. ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯನ್ನೂ ಪ್ರಾರಂಭಿಸಿ 90 ವರ್ಷಗಳ ಬದುಕು ಕಂಡಿದೆ. ಚಂಪಾ ಅವರ ಸಂಕ್ರಮಣ, ವೀರಮಾತೆ, ಕಲ್ಪನಾ ಮತ್ತು ನಟರಾಜ ಸಿನೆಮಾ ಮಾಸಿಕ, ಮತ್ತಿತರ ಹಲವು ಪಾಕ್ಷಿಕ, ಮಾಸಿಕಗಳು ಪ್ರಸಿದ್ಧಿ ಪಡೆದಿವೆ. ಹುಬ್ಬಳ್ಳಿ ಪ್ರಮುಖ ವಾಣಿಜ್ಯ ನಗರವಾಗಿರುವುದರಿಂದ ಅಲ್ಲಿ ಪ್ರಜಾವಾಣಿ, ಉದಯವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ಕನ್ನಡಪ್ರಭ, ಹೊಸದಿಗಂತ,  ಸಂಜೆವಾಣಿ ಸಹಿತ ಎಲ್ಲ ರಾಜ್ಯಮಟ್ಟದ ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಲಯಗಳನ್ನು ಹೊಂದಿವೆ ಮತ್ತು ಆವೃತ್ತಿಗಳನ್ನು ಪ್ರಕಟಿಸುತ್ತಿವೆ. ಎಲ್ಲ ಟಿವಿ ಸುದ್ದಿ ಚಾನೆಲ್ ವರದಿಗಾರರನ್ನೂ ಒಳಗೊಂಡಿರುವ ಹುಬ್ಬಳ್ಳಿ- ಧಾರವಾಡಗಳ ಮಾಧ್ಯಮಕ್ಷೇತ್ರ ಅಪಾರವಾಗಿ ವಿಸ್ತರಿಸಿಕೊಂಡಿದೆ.   

ಗದಗ ಜಿಲ್ಲೆ  

ಐದು ತಾಲೂಕುಗಳಿಂದೊಡಗೂಡಿದ ಗದಗ ಜಿಲ್ಲೆ ಸಹ ಪತ್ರಿಕಾ ಕ್ಷೇತ್ರದಲ್ಲಿ ಹಾಗೆಯೇ ಮುದ್ರಣ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ಗದಗ - ಬೆಟಗೇರಿ ಅವಳಿ ನಗರಗಳಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೆಲವು ಪತ್ರಿಕೆಗಳು ಹೊರಟರೂ ಅವು ಹೆಚ್ಚು ಕಾಲ ಉಳಿಯಲಿಲ್ಲ. ಈ ಜಿಲ್ಲೆಯ ಪತ್ರಿಕಾರಂಗಕ್ಕೆ ಭದ್ರ ತಳಹದಿ ಹಾಕಿಕೊಟ್ಟವರಲ್ಲಿ ಹೊಂಬಾಳಿ ಕುಟುಂಬ, ಹ. ರಾ. ಕಿದಿಯೂರು ಕುಟುಂಬ, ಅಣ್ಣಿಗೇರಿ ಕುಟುಂಬ, ಕೌತಾಳ ವೀರ​‍್ಪ ಮತ್ತು ಪ. ಲೋ. ಬಂಕಾಪುರ ಮೊದಲಾದವರು ಸ್ಮರಣೀಯರು. ಹೊಂಬಾಳಿಯವರ ನಾಗರಿಕ ದಿನಪತ್ರಿಕೆ 1954ರಲ್ಲಿ ಆರಂಭವಾಗಿ ಇಂದಿಗೂ ಮುಂದುವರಿದಿದ್ದರೆ, 1968ರಲ್ಲಿ ಕಿದಿಯೂರರು ಪ್ರಾರಂಭಿಸಿದ "ನವೋದಯ" ಪತ್ರಿಕೆ ಸಹ ಇಂದಿಗೂ ಪ್ರಕಟನೆ ಕಾಣುತ್ತಿದೆ. ಬಂಕಾಪುರ ಅವರು ಕರ್ನಾಟಕ ಬಂಧು, ಗರ್ಜನೆ, ಸರ್ವಜ್ಞ ಮೊದಲಾದ ಪತ್ರಿಕೆಗಳನ್ನು ಹೊರತಂದು ನಂತರ ವಿಶಾಲ ಕರ್ನಾಟಕದ ಸಂಪಾದಕರಾದರು. ಕೆ.ಎಲ್‌. ಅಣ್ಣಿಗೇರಿ ಯವರು 1968ರಲ್ಲಿ ಆರಂಭಿಸಿದ ಸ್ಫೂರ್ತಿ  ಮಾಸಿಕ ದೀರ್ಘಕಾಲ ನಡೆದ ಪತ್ರಕೆಗಳಲ್ಲೊಂದು. ವಿ. ಕೆ. ಕೌತಾಳರ ನೇಗಿಲಯೋಗಿ ಸಹ ಪ್ರಮುಖ ಪತ್ರಿಕೆಯೆನಿಸಿದೆ. ಗಾನಯೋಗಿ ಪಂಚಾಕ್ಷರಿ ಗವಾಯ್ ಅವರ ಆಶ್ರಮದಿಂದ ಪ್ರಕಟವಾಗುವ ಪಂಚಾಕ್ಷರವಾಣಿ ಮಾಸಿಕ 1948 ರಿಂದಲೇ ಬೆಳಕು ಕಾಣುತ್ತಿದೆ. ಈಗಲೂ ಗದಗ ಜಿಲ್ಲೆಯಲ್ಲಿ ಹೊಸ ಹೊಸ ಪತ್ರಿಕೆಗಳನ್ನು ಹೊರತರುವ ಪ್ರಯತ್ನಗಳು ನಡೆದಿದ್ದು ಕಿತ್ತೂರು ಕರ್ನಾಟಕ ದಿನಪತ್ರಿಕೆ , ಪ್ರಜಾಪಥ, ವಿಜಯ ಸಾಕ್ಷಿ, ಗದಗ ಸಂಜೆ, ರೈಜ್ ಆಫ್ ಗದಗ, ಸ್ನೇಹಜೀವಿ, ಡೇಲಿ ಸಾಲಾರ್, ಚಕ್ರವರ್ತಿ, ರತ್ನಾಕರವಾಣಿ ಮೊದಲಾದವುಗಳನ್ನಿಲ್ಲಿ ಉಲ್ಲೇಖಿಸಬಹುದು.   

ಹಾವೇರಿ ಜಿಲ್ಲೆ  

ಹಿಂದೆ ಧಾರವಾಡ ಜಿಲ್ಲೆಯಲ್ಲಿ ಒಳಗೊಂಡಿದ್ದಾಗಲೇ ಹಾವೇರಿ ಭಾಗದಲ್ಲೂ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದು, ಈಗ ಸ್ವತಂತ್ರ ಜಿಲ್ಲೆಯಾದ ನಂತರ ಸಹಜವಾಗಿಯೇ ಮಾಧ್ಯಮ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಈ ಜಿಲ್ಲೆಗೆ ಹೆಮ್ಮೆ ತಂದ " ಸದ್ಬೋಧ ಚಂದ್ರಿಕೆ" ಅಗಡಿ ಆನಂದವನದಿಂದ 1908ರಲ್ಲಿ ಆರಂಭವಾಗಿ ಶತಮಾನದ ಬದುಕು ಕಂಡ ಮಹತ್ವದ ಪತ್ರಿಕೆ. ಕನ್ನಡದ ಕಾದಂಬರಿ ಕ್ಷೇತ್ರಕ್ಕೆ ಬುನಾದಿ ನಿರ್ಮಿಸಿದ ಗಳಗನಾಥರು (ವೆಂಕಟೇಶ ರಂಗೋ ಕುಲಕರ್ಣಿ) ಈ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದು ಮತ್ತು ಆ ಕಾಲದಲ್ಲೇ ಸುಮಾರು ಎಂಟು ಸಾವಿರ ಚಂದಾದಾರರನ್ನು ಹೊಂದಿದ್ದು ಉಲ್ಲೇಖನೀಯ. ಗಳಗನಾಥರು "ಸದ್ಗುರು" ಎಂಬ ಮಾಸಿಕವನ್ನೂ ಕೆಲಕಾಲ ನಡೆಸಿದ್ದರು. ಇದೇ ಜಿಲ್ಲೆಯ ರಾಣಿಬೆನ್ನೂರಿನಿಂದ ಮಹಾನುಭಾವಿಮಠ ಎಂಬವರು "ಶಿಡ್ಲು" ದೈನಿಕವನ್ನು 1969ರಲ್ಲಿ ಪ್ರಾರಂಭಿಸಿದ್ದರೆ, ಮೂಡಣ ಎಂಬ ದೈನಿಕ ವನ್ನು 1983 ರಿಂದ ವಿ. ಎಸ್‌. ಕಾಶೆಟ್ಟಿ ಅವರು ಪ್ರಾರಂಭಿಸಿದರು.  

ರಾಜ್ಯದ ದೊಡ್ಡ ದೈನಿಕಗಳೊಂದಿಗೆ ಸ್ಥಳೀಯವಾಗಿಯೂ ಸಾಕಷ್ಟು ಪತ್ರಿಕೆಗಳು ಹೊರಬರುತ್ತಿವೆ. ಉದಯವಾಣಿ, ಟೈಮ್ಸ್‌ ಆಫ್ ಇಂಡಿಯಾ, ವಿಜಯ ಕರ್ನಾಟಕ ಸಹಿತ  ಹಲವು ಕನ್ನಡ ಇಂಗ್ಲಿಷ ಪತ್ರಿಕೆಗಳು ಆನ್ ಲೈನ್ ನ್ಯೂಸ್ ಸರ್ವೀಸ್ ನೀಡುತ್ತಿವೆ. ಕೌರವ, ಜನತಾವಾಣಿ, ಜನಮಿಡಿತ, ಜನಮಾಧ್ಯಮ, ಪ್ರಜಾಪ್ರಗತಿ, ಸುದ್ದಿದಿನ ಮೊದಲಾದ ಪತ್ರಿಕೆಗಳು ಹಾವೇರಿ ಪತ್ರಿಕಾರಂಗದಲ್ಲಿ ಸ್ಥಾನ ಪಡೆದುಕೊಂಡಿವೆ.  

ಉತ್ತರ ಕನ್ನಡ ಜಿಲ್ಲೆ  

ಸೂರಿ ವೆಂಕಟರಮಣ ಶಾಸ್ತ್ರಿ ಕರ್ಕಿ ಮತ್ತು ವಿನಾಯಕ ಶಾಸ್ತ್ರಿ ಇವರನ್ನು ಉತ್ತರ ಕನ್ನಡ ಜಿಲ್ಲೆಯ ಪತ್ರಿಕಾರಂಗದ ಆದ್ಯರೆನ್ನಬಹುದು. 1884ರಲ್ಲಿ ಹೊರಬಂದ ಹವ್ಯಕ ಸುಬೋಧ ಮೊದಲ ಪತ್ರಿಕೆ. ಸತ್ಯಸುಧಾ, ಕಾರವಾರ ಸಮಾಚಾರ, ವಿಚಾರಿ, ವಿನೋದಿನಿ ಮೊದಲಾದ ಪ್ರಾಂಭಿಕ ಪತ್ರಿಕೆಗಳ ನಂತರ 1916ರಲ್ಲಿ ಕುಮಟೆಯಿಂದ ಹೊರಬಂದ ಕಾನಡಾವೃತ್ತ ಶತಮಾನ ಕಂಡ ಪತ್ರಿಕೆಯೆನಿಸಿತು. 1947ರಲ್ಲಿ ಕಾರವಾರದಲ್ಲಿ ಎಸ್‌. ಕೆ. ಪೈ ಅವರಿಂದ ಆರಂಭವಾದ ನಾಗರಿಕ ವಾರಪತ್ರಿಕೆ ಈಗ ಹೊನ್ನಾವರದಲ್ಲಿ ಕೃಷ್ಣಮೂರ್ತಿ ಹೆಬ್ಬಾರ ಅವರ ಸಂಪಾದಕತ್ವದಲ್ಲಿ ಮುನ್ನಡೆದಿದೆ. ಸರ​‍್ಕರ್ಣೇಶ್ವರರ ಸಾಧನ, ವಾಮನ ಹೊದಿಕೆಯವರ ಭೂದಾನ, ದಿನಕರ ದೇಸಾಯಿಯವರ ಜನಸೇವಕ, ತಿಮ್ಮಪ್ಪ ನಾಯಕರ ಗ್ರಾಮಸೇವಕ, ಕೊಠಾರಿಯವರ ಶಿರಸಿ ಸಮಾಚಾರ, ಹೊನ್ನಾವರದ ಜನತಾ, ಕುಮಟೆಯ ಜೀವೋತ್ತಮ ಮತ್ತು ಚುನಾವಣೆ ವಾರಪತ್ರಿಕೆ, ಟಿ. ಕೆ. ಮಹಮೂದರ ಸಮಾಜವಾಣಿ, ಮತ್ತು ಯುಗವಾಣಿ,  ಸಿದ್ದಾಪುರದ ಮುನ್ನಡೆ, ಭಾವಿಕೇರಿ ಹೊನ್ನಪ್ಪನವರ ನುಡಿಜೇನು, ಬಿ. ವಿ. ನಾಯಕರ ಜನಧ್ವನಿ, ಶಿರಸಿಯ ಲೋಕಧ್ವನಿ, ಶಿರಸಿ ಸಮಾಚಾರ ಮೊದಲಾದವು ಈ ಜಿಲ್ಲೆಯ ಪತ್ರಿಕಾರಂಗದಲ್ಲಿ ಹೆಸರಾಗಿವೆ. ಸದ್ಯ ಹೊನ್ನಾವರದ ನಾಗರಿಕ, ಕಾರವಾರದ ಕರಾವಳಿ ಮುಂಜಾವು, ಶಿರಸಿಯ ಜನಮಾಧ್ಯಮ ಪತ್ರಿಕೆಗಳು ಸಾಕಷ್ಟು ಪ್ರಸಾರ ಹೊಂದಿ ಪ್ರಕಟಗೊಳ್ಳುತ್ತಿವೆ. ಮಣಿಪಾಲದ ಉದಯವಾಣಿ ಈ ಜಿಲ್ಲೆಯಲ್ಲೂ ಹೆಚ್ಚಿನ ಪ್ರಸಾರ ಹೊಂದಿದೆ. ಎಲ್ಲಾ ರಾಜ್ಯಮಟ್ಟದ ದೈನಿಕಗಳು ಜಿಲ್ಲೆಗಾಗಿ ಹೆಚ್ಚಿನ ಪುರವಣಿಗಳನ್ನು ಹೊರತರುತ್ತಿವೆ.  

ಮಾಧ್ಯಮ ಕ್ಷೇತ್ರ ಅಗಾಧ ಸ್ವರೂಪದಲ್ಲಿ ಬೆಳೆದುನಿಂತಿರುವದರಿಂದ ಏಳು ಜಿಲ್ಲೆಗಳ ಒಂದು ಸಂಕ್ಷಿಪ್ತ ಹಕ್ಕಿನೋಟ ಮಾತ್ರ ಇಲ್ಲಿದೆ. ಆಧುನಿಕ ಆವಿಷ್ಕಾರಗಳೊಂದಿಗೆ ಆಗಾಗ ಬದಲಾವಣೆ ಕಾಣುತ್ತಲೇ ಇರುವ ಪತ್ರಿಕೆಗಳು ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳು ತಮ್ಮ ತಮ್ಮ ಓದುಗರ ವಲಯವನ್ನು ವಿಸ್ತರಿಸಿಕೊಳ್ಳಲು ಬಗೆಬಗೆಯ ಆಕರ್ಷಣೆಗಳನ್ನು ಕಂಡುಕೊಳ್ಳುವಲ್ಲಿ ಪೈಪೋಟಿ ನಡೆಸಿರುವುದೂ ಸಹಜ. ವಿಶೇಷವಾಗಿ ಆನ್ ಲೈನ್ ಇ ಪೇಪರ್ ಗಳಿಗೆ ಮಹತ್ವ ಕೊಡುತ್ತಿವೆ. ಕಿತ್ತೂರು ಕರ್ನಾಟಕ ಭಾಗದ ಹೆಚ್ಚಿನ ಜಿಲ್ಲೆಗಳಲ್ಲಿ ವಾಣಿಜ್ಯೋದ್ಯಮ ಇನ್ನೂ ಸಾಕಷ್ಟು ಬೆಳವಣಿಗೆ ಕಾಣಬೇಕಿದ್ದು, ಕೆಲವು ದೊಡ್ಡ ಪತ್ರಿಕೆಗಳ ಹೊರತಾಗಿ  ಸ್ಥಾನಿಕ / ಪ್ರಾದೇಶಿಕ ಪತ್ರಿಕೆಗಳು ಆರ್ಥಿಕ ಕೊರತೆಯಿಂದ ಬಳಲುತ್ತಿದ್ದು ಹೊಸ ಪತ್ರಿಕೆಗಳು ಹೆಚ್ಚು ಕಾಲ ಬದುಕುಳಿಯಲು ಅನುಕೂಲಕರ ವಾತಾವರಣ  ಇಲ್ಲ. ಸರಕಾರ ಇಂತಹ ಪತ್ರಿಕೆಗಳ ನೆರವಿಗೂ ಬರಬೇಕಾಗಿದೆ.   

- ಎಲ್‌. ಎಸ್‌. ಶಾಸ್ತ್ರಿ 

ಹಿರಿಯ ಸಾಹಿತಿಗಳು, ಪತ್ರಕರ್ತರು 

         ಬೆಳಗಾವಿ  


- * * * - 



ಸುದ್ದಿ ಓದಿ