ಕರ್ನಾಟಕ ರತ್ನ’ ಪ್ರಶಸ್ತಿಯನ್ನು ದೊರಕಿಸಿಕೊಡುವ ಪೂರ್ವಭಾವಿ ಸಭೆ
ಮುಂಡರಗಿ 18: ಹಿಂದುಳಿದ ಪ್ರದೇಶವಾದ ಈ ಭಾಗದಲ್ಲಿ ಕಳೆದ ಆರು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಆಚಾರಶಿಲತೆಯಲ್ಲಿ ಅಗ್ರಗಣ್ಯರಾಗಿ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ರಂಗಗಳಲ್ಲಿ ಕೇವಲ ಮುಂಡರಗಿ ಸೊತ್ತಾಗಿ ಉಳಿಯದೇ ಕರ್ನಾಟಕ ಮುತ್ತಾಗಿ ಬೆಳಗುತ್ತಿರುವ ನಾಡೋಜ ಡಾ.ಅನ್ನದಾನೀಶ್ವರ ಶ್ರೀಗಳಿಗೆ ಕರ್ನಾಟಕ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಬೇಕು ಎಂದು ಕುಕನೂರ ಡಾ.ಮಹಾದೇವ ದೇವರು ಒತ್ತಾಯಿಸಿದರು.
ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಏರಿ್ಡಸಿದ ಮುಂಡರಗಿ ಪಟ್ಟಣದ ಭಕ್ತರ ಸಮ್ಮುಖದಲ್ಲಿ ಮುಂಡರಗಿಯ ಅನ್ನದಾಸೋಹಿ ಡಾ.ಅನ್ನದಾನೀಶ್ವರ ಶ್ರೀಗಳಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ದೊರಕಿಸಿಕೊಡುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬರಗಾಲ ಈ ಭಾಗದ ಗ್ರಾಮೀಣ ಬಡ ಮಕ್ಕಳು ಹಾಗೂ ಮಹಿಳೆಯರಿಗಾಗಿ ಶಿಕ್ಷಣ ದೀಕ್ಷೆ ನೀಡಿದ ಫಲವಾಗಿ ಎಲ್.ಕೆ.ಜಿ ಯಿಂದ ಹಿಡಿದು ಪಿಜಿ ಯವರೆಗೂ ಸುಮಾರು 30 ಕ್ಕಿಂತ ಹೆಚ್ಚು ಶಾಲಾ ಕಾಲೇಜುಗಳು ನಾಡಿನ ಜಿಲ್ಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿವೆ. ಅಷ್ಟೇ ಅಲ್ಲದೇ ಕಾಶಿ ಪಾಂಡಿತ್ಯವನ್ನು ಮೈಗೂಡಿಸಿಕೊಂಡ ಪೂಜ್ಯರು ಸೃಜನಶೀಲ ಸಾಹಿತಿಗಳಾಗಿ ವಚನ ಸಾಹಿತ್ಯ, ಸಂಪಾದನೆ, ಸಂಶೋಧನೆ, ವಿಮರ್ಶ ಮುಂತಾದ 150ಕ್ಕಿಂತ ಹೆಚ್ಚು ಮೌಲ್ಯಿಕ ಗ್ರಂಥಗಳನ್ನು ಬರೆದರು. ಹಾಗೂ 250 ಗ್ರಂಥಗಳನ್ನು ಈಗಾಗಲೇ ಶ್ರೀಮಠದಿಂದ ಪ್ರಕಟಿಸಿದ ಪ್ರಸಿದ್ಧಿ ಅವರಿಗೆ ಸಲ್ಲುತ್ತದೆ.
ಪೂಜ್ಯರು ವಿವಿಧ ಕ್ಷೇತ್ರದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಚೈತನ್ಯ ನೀಡುವಂತ ಮಹಾಶಿವಯೋಗಿಗಳಾಗಿದ್ದಾರೆ. ಶ್ರೀಗಳು ಕಟ್ಟಿರುವ 30 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಹಲವಾರು ವಿದ್ಯಾರ್ಥಿಗಳು ವಿವಿಧ ಸಾಧನೆ ಮಾಡಿದ್ದಾರೆ. ಶ್ರೀಗಳು ಶರಣರ ಚರಿತ್ರೆ-ಚಾರಿತ್ರ್ಯ ಕಾಪಾಡಲು ಪ್ರಚಾರ ಉಪನ್ಯಾಸ ಮಾಲೆಗೆ ಚಾಲನೆ ನೀಡಿದ ನಾಡಿನ ಪ್ರಥಮ ಮಠಾದೀಶರು. ಅವರು ಸಾಹಿತ್ಯದ ಮೇಲೆಯೇ ನಾಡಿನ ಹಲವಾರು ಜನ ವಿದ್ವಾಂಸರು ಪಿಎಚ್ಡಿ ಹಾಗೂ ಎಮ್.ಪಿಲ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಹೀಗಾಗಿ ವಿವಿಧ ಕ್ಷೇತ್ರದಲ್ಲಿ ಶ್ರೀಗಳ ಸಾಧನೆ ಅಪಾರವಾದುದು. ಇಂತಹ ಮಹಾಶಿವಯೋಗಿಗಳು ‘ಕರ್ನಾಟಕ ರತ್ನ’ ಪ್ರಶಸ್ತಿಗೆ ಸಮರ್ಥವಾಗಿದ್ದಾರೆ. ಆದರಿಂದ ಕರ್ನಾಟಕ ಸರ್ಕಾರ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳ ಸಾಧನೆಯನ್ನು ಪರಿಗಣಿಸಿ ಇವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಹಿರಿಯ ಭಕ್ತರಾದ ಎಸ್.ಬಿ.ಕರಿಭರಮಗೌಡ್ರ ಮಾತನಾಡಿ, ಶ್ರೀಗಳು ಈ ಭಾಗದ ಶೈಕ್ಷಣಿಕ ಸಾಹಿತ್ಯದ ಸಾರ್ವಭೌಮರಾಗಿ ಪ್ರತಿಯೊಬ್ಬರಿಗೂ ಸಾಹಿತ್ಯದ ಆಸಕ್ತಿಯನ್ನು ಮೂಡಿಸಿದ್ದಾರೆ. ಹೀಗಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಹಿರಿಯ ಭಕ್ತರಾದ ಕರಬಸಪ್ಪ ಹಂಚಿನಾಳ, ಕಾಂತರಾಜ ಹಿರೇಮಠ, ಎಂ.ಜಿ.ಗಚ್ಚಣ್ಣವರ, ಮಂಜುನಾಥ ಇಟಗಿ ಮಾತನಾಡಿದರು. ಬಾಬಣ್ಣ ಶಿವಶೆಟ್ಟರ್, ಡಾ.ಡಿ.ಸಿ.ಮಠದ, ಹೊಸಮಠ ಸರ್, ಶಿವಾನಂದ ತಾಮ್ರಗುಂಡಿ, ದ್ರುವಕುಮಾರ ಹೂಗಾರ, ಅಡಿವೆಪ್ಪ ಚಲವಾದಿ ಹಾಗೂ ಇತರರು ಇದ್ದರು.