‘ಕಲ್ಕಿ 2898 ಎಡಿ 2’ ಚಿತ್ರದಲ್ಲಿ ಭೈರವನಾಗಿ ಪ್ರಭಾಸ್ ಮರಳಿಕೆ; ಹುಟ್ಟುಹಬ್ಬದ ವಿಶೇಷ ವಿಡಿಯೋ ಬಿಡುಗಡೆ
ಮುಂಬೈ, ಅ. 23 : ನಟ ಪ್ರಭಾಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿರುವ ‘ಕಲ್ಕಿ 2898 ಎಡಿ 2’ ಚಿತ್ರದ ನಿರ್ಮಾಪಕರು, ಚಿತ್ರದ ಬಹುನಿರೀಕ್ಷಿತ ಎರಡನೇ ಭಾಗದಲ್ಲಿ ಭೈರವನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಪ್ರಭಾಸ್ ಮತ್ತೆ ಚಿತ್ರದ ಸೆಟ್ಗೆ ಮರಳಿರುವ ದೃಶ್ಯಗಳಿವೆ. ನಿರ್ದೇಶಕ ನಾಗ್ ಅಶ್ವಿನ್ ಅವರು ದೃಶ್ಯವೊಂದರ ಚಿತ್ರೀಕರಣದ ವೇಳೆ ಪ್ರಭಾಸ್ ಅವರಿಗೆ ಸೂಚನೆ ನೀಡುತ್ತಿರುವುದೂ ಕಂಡುಬಂದಿದೆ. ಈ ತೆರೆಹಿಂದಿನ ವಿಡಿಯೋ ಚಿತ್ರದ ಸಿದ್ಧತೆಗಳ ಕುರಿತ ಸಣ್ಣ ಝಲಕ್ ನೀಡಿದ್ದು, ಮುಂದಿನ ಭಾಗದ ಬಗ್ಗೆ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಭಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ನಿರ್ಮಾಪಕರು, ಅವರನ್ನು ಭಾರತೀಯ ಚಿತ್ರರಂಗದ ಸೂಪರ್ ಹೀರೋ ಹಾಗೂ ಪ್ರತಿಯೊಂದು ಪೀಳಿಗೆಯ ಅಭಿಮಾನಿಗಳ ನೆಚ್ಚಿನ ನಟ ಎಂದು ಬಣ್ಣಿಸಿದ್ದಾರೆ. ಅವರೊಂದಿಗೆ ಮತ್ತೊಂದು ಅದ್ಭುತ ಸಿನಿಮಾ ಪ್ರಯಾಣ ಆರಂಭಿಸಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
2024ರಲ್ಲಿ ಬಿಡುಗಡೆಯಾದ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಪ್ರಭಾಸ್ ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಪಾತ್ರದ ಹಾಸ್ಯಮಯ ಶೈಲಿ, ಆಕರ್ಷಕ ವ್ಯಕ್ತಿತ್ವ ಹಾಗೂ ಸಾಹಸ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆಗಳಾಗಿದ್ದವು.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಭಗವಾನ್ ವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿಯ ಆಗಮನಕ್ಕಾಗಿ ಕಾಯುತ್ತಿರುವ ಭವಿಷ್ಯದ ಜಗತ್ತಿನಲ್ಲಿ ಚಿತ್ರದ ಕಥೆ ಸಾಗುತ್ತದೆ. ಭಾರತೀಯ ಪುರಾಣ ಮತ್ತು ವೈಜ್ಞಾನಿಕ ಕಾಲ್ಪನಿಕ ಕಥಾಹಂದರವನ್ನು ವಿಶಿಷ್ಟವಾಗಿ ಸಂಯೋಜಿಸಿದ್ದು ಚಿತ್ರದ ವಿಶೇಷತೆಯಾಗಿತ್ತು.
ಮೊದಲ ಭಾಗದ ಭರ್ಜರಿ ಯಶಸ್ಸಿನ ಬಳಿಕ ಚಿತ್ರದ ಎರಡನೇ ಭಾಗದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ, ‘ಕಲ್ಕಿ 2898 ಎಡಿ 2’ ಚಿತ್ರದ ಕಥಾಹಂದರ ಹಾಗೂ ಬಿಡುಗಡೆಯ ದಿನಾಂಕದ ಕುರಿತು ನಿರ್ಮಾಪಕರು ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.