ಪೋಷಣ್ ಮಾಸಾಚರಣೆ: ಪೌಷ್ಟಿಕ ಆಹಾರ ಸೇವನೆಗೆ ಒತ್ತು
ಲೋಕದರ್ಶನ ವರದಿ
ಗದಗ, ಸೆ. 22: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಗದಗ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ಸ್ತ್ರೀಶಕ್ತಿ ಭವನದಲ್ಲಿ ಸೋಮವಾರ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಲಲಿತಾ ಉದ್ಘಾಟಿಸಿದರು. ಜಿಲ್ಲಾ ಸಂಯೋಜಕಿ ಶ್ರೀಮತಿ ನೇತ್ರಾ ಹರ್ತಿ ಅವರು ಮಾತೃವಂದನಾ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮಹಿಳಾ ಅಭಿವೃದ್ಧಿ ನೀರೀಕ್ಷಕಿ ಶ್ರೀಮತಿ ದ್ರಾಕ್ಷಾಯಿಣಿ ಪಾಟೀಲ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ದೊರೆಯುವ ಗೃಹಲಕ್ಷ್ಮಿ, ಉದ್ಯೋಗಿನಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಎಚ್.ಎಸ್. ದೊಡ್ಡಮನಿ ಹಾಗೂ ಪಾಟೀಲ ಅವರು ಮಾತನಾಡಿ, ಸೂಕ್ತ ವಯಸ್ಸಿನಲ್ಲಿ ವಿವಾಹವಾಗುವುದರಿಂದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಿ, ಪೌಷ್ಟಿಕ ಆಹಾರ ಸೇವಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.