ಜನಸಂಖ್ಯೆ ಸ್ಥಿರತೆ ಕಾಪಾಡಬೇಕು: ಪ್ರವೀಣ
ಮುಂಡಗೋಡ:ಜನಸಂಖ್ಯೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಿ ಜನಸಂಖ್ಯೆ ಸ್ಥಿರತೆಯನ್ನು ಕಾಪಾಡಬೇಕು ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ತಾಲೂಕಾ ಆರೋಗ್ಯ ಇಲಾಖೆ, ಸರಕಾರಿ ಪದವಿಪೂರ್ವ ಕಾಲೇಜ್, ಸರಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಹಶೀಲ್ದಾರ ಶಂಕರ ಗೌಡಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಟ್ಟಣದ ತಾಲೂಕಾ ಆಸ್ಪತ್ರೆಯಿಂದ ಆರಂಭಗೊಂಡ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರೀವೀಕ್ಷಣಾ ಮಂದಿರದಿಂದ ಲೊಯೋಲ ವಿಕಾಸ ಕೇಂದ್ರದ ಸಭಾಭವನ ಸೇರಿತು.